ಪೆರ್ಲ-ಪೂವನಡ್ಕ ರಸ್ತೆ ಅಯ್ಯಪ್ಪ ಮಂದಿರ ಸಮೀಪದ ತಿರುವಿನಲ್ಲಿ ಕುಸಿದಿರುವುದು. 
ಉಡುಪಿ

ನೀರಿನ ಪೈಪ್ ಒಡೆದು ರಸ್ತೆ ಕುಸಿತ

ಇಂದಿರಾ ಎನ್ ಕೆ

ಕಾಸರಗೋಡು: ಎಣ್ಮಕಜೆ ಪಂಚಾಯಿತಿ ಪೆರ್ಲದಿಂದ ಪೂವನಡ್ಕಕ್ಕೆ ತೆರಳುವ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ರಸ್ತೆ ಪೆರ್ಲ ಸಮೀಪದ ಶ್ರೀ ಅಯ್ಯಪ್ಪ ಮಂದಿರ ಪರಿಸರದಲ್ಲಿ ಕುಸಿದಿದ್ದು ಅಪಾಯದಲ್ಲಿದೆ.

ಜಲಪ್ರಾಧಿಕಾರ ಕುಡಿಯುವ ನೀರು ಪೂರೈಕೆಗೆ ಅಳವಡಿಸಿರುವ ಪೈಪ್ ಒಡೆದು ಭಾರಿ ಪ್ರಮಾಣದಲ್ಲಿ ನೀರು ಹೊರಬಂದಿರುವುದರಿಂದ ರಸ್ತೆ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನೀರು ಪೂರೈಕೆಗೆ ಕಳಪೆ ಪೈಪ್‌ಗಳನ್ನು ಅಳವಡಿಸಿರುವುದರಿಂದ ಅಲ್ಲಲ್ಲಿ ಒಡೆದು ನೀರು ಪೋಲಾಗುವುದರ ಜತೆಗೆ ರಸ್ತೆಗೂ ಹಾನಿಯುಂಟಾಗುತ್ತಿದೆ.

ಹೊಂಡಗಳು ಸೃಷ್ಟಿ: ಈ ರಸ್ತೆ ಅಯ್ಯಪ್ಪ ಮಂದಿರದಿಂದ ಅನತಿ ದೂರದಲ್ಲಿರುವ ಆಯುರ್ವೇದ ಆಸ್ಪತ್ರೆ ಮುಂಭಾಗದಲ್ಲಿ ಭಾರಿ ಹೊಂಡಗಳು ಸೃಷ್ಟಿಯಾಗಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ಮಧ್ಯೆ ಮಂದಿರ ಸಮೀಪದ ಕಡಿದಾದ ತಿರುವಿನ ಭಾಗದಲ್ಲೇ ರಸ್ತೆ ಕುಸಿದಿರುವುದು ವಾಹನ ಸಂಚಾರಕ್ಕೆ ಮತ್ತಷ್ಟು ತೊಡಕುಂಟಾಗಿದೆ. ವೇಗದಿಂದ ಬರುವ ವಾಹನಗಳಿಗೆ ರಸ್ತೆ ಕುಸಿದಿರುವುದು ಅರಿವಿಗೆ ಬಾರದೆ ಅಪಘಾತವುಂಟಾಗುವ ಸಾಧ್ಯತೆ ಇದೆ.
ಪೆರ್ಲ ಪೇಟೆಯಿಂದ ಶಾಂತಿನಗರ ಕ್ರಾಸ್‌ವರೆಗೆ ಒಳಚರಂಡಿ ಅವ್ಯವಸ್ಥೆಯಿಂದ ಇಲ್ಲಿ ರಸ್ತೆ ಹಾಳಾಗುತ್ತಿದೆ. ಆಯುರ್ವೇದ ಆಸ್ಪತ್ರೆ ಬಳಿ 25 ಲಕ್ಷ ರೂ. ವೆಚ್ಚದಲ್ಲಿ ನಡೆಸಲಾದ ಕಾಮಗಾರಿ ನಿಷ್ಪ್ರಯೋಜಕವಾಗಿದೆ. ಗುಡ್ಡದಿಂದ ಹರಿದು ಬರುವ ಭಾರಿ ಪ್ರಮಾಣದ ನೀರು ಚರಂಡಿ ಸೇರದೆ ರಸ್ತೆಯಲ್ಲೇ ಹರಿಯುವುದರಿಂದ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಲಪ್ರಾಧಿಕಾರ ಅಳವಡಿಸಿರುವ ಪೈಪ್‌ಒಡೆದಿರುವುದು ರಸ್ತೆ ಕುಸಿಯಲು ಕಾರಣವಾಗಿದೆ. ಈ ಬಗ್ಗೆ ಜಲಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದ್ದು, ಇಲಾಖೆ ನಡುವಿನ ಒಪ್ಪಂದ ಪ್ರಕಾರ ಪ್ರಾಧಿಕಾರ ರಸ್ತೆ ದುರಸ್ತಿ ನಡೆಸಿಕೊಡಬೇಕಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಒತ್ತಡ ಹೇರುತ್ತಿದ್ದು, ಶೀಘ್ರ ದುರಸ್ತಿ ನಡೆಸಿಕೊಡುವುದಾಗಿ ಜಲಪ್ರಾಧಿಕಾರ ಅಧಿಕಾರಿಗಳು ಭರವಸೆ ನೀಡಿದ್ದಾರೆ.

— ಭರತನ್ ಆರ್., ಪ್ರಭಾರ ಸಹಾಯಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಬದಿಯಡ್ಕ