ಜಲ್ಲಿ ಹರಡಿರುವ ಪಂಜಿನಡ್ಕ-ಮೈಲೊಟ್ಟು ರಸ್ತೆ.
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಿನಡ್ಕ-ಮೈಲೊಟ್ಟು ಜಿಲ್ಲಾ ಪಂಚಾಯಿತಿ ರಸ್ತೆ ಹೊಂಡಗುಂಡಿಗಳಿಂದ ನರಕಸದೃಶವಾಗಿದ್ದು, ಸಾರ್ವಜನಿಕರ ತೀವ್ರ ಪ್ರತಿಭಟನೆಯ ಬಳಿಕ ಆರಂಭಗೊಂಡಿದ್ದ ದುರಸ್ತಿ ಕಾಮಗಾರಿಯೂ ಈಗ ಜನರಿಗೆ ಮತ್ತೊಂದು ಶಾಪವಾಗಿ ಪರಿಣಮಿಸಿದೆ. ಗುತ್ತಿಗೆದಾರರು ರಸ್ತೆಯ ಹೊಂಡಗಳಿಗೆ ಜಲ್ಲಿಕಲ್ಲುಗಳನ್ನು ಸುರಿದು, ಡಾಂಬರು ಹಾಕದೆ ಹಾಗೆಯೇ ಬಿಟ್ಟಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ.
ವಾಹನ ಸವಾರರ ಮೂಳೆ ಮುರಿತ
ರಸ್ತೆಯುದ್ದಕ್ಕೂ ಹರಡಿಕೊಂಡಿರುವ ಜಲ್ಲಿಕಲ್ಲುಗಳಿಂದಾಗಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುತ್ತಿದ್ದು, ಈಗಾಗಲೇ ಕೆಲವರು ಬಿದ್ದು ಮೂಳೆ ಮುರಿಸಿಕೊಂಡಿದ್ದಾರೆ. ಇನ್ನು ಲಾರಿ, ಟಿಪ್ಪರ್‌ನಂತಹ ಭಾರಿ ವಾಹನಗಳು ಚಲಿಸುವಾಗ ಈ ಜಲ್ಲಿಕಲ್ಲುಗಳು ಸಿಡಿದು ಹಾರಿ ಇತರ ವಾಹನ ಹಾಗೂ ಪಾದಚಾರಿಗಳಿಗೆ ತಗಲುತ್ತಿದ್ದು, ದೊಡ್ಡ ಅಪಾಯವನ್ನೇ ಆಹ್ವಾನಿಸುತ್ತಿದೆ. ಪ್ರಸ್ತುತ ಮಳೆಗಾಲ ಆರಂಭವಾಗಿರುವುದರಿಂದ ಹೊಂಡಗಳು ಮತ್ತು ಜಲ್ಲಿಕಲ್ಲುಗಳ ಮರೆಯಲ್ಲಿ ರಸ್ತೆ ಯಾವುದು, ಹೊಂಡ ಯಾವುದು ಎಂದು ತಿಳಿಯದೆ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಇದಲ್ಲದೆ, ಗ್ರಾಮೀಣ ಭಾಗದ ರಸ್ತೆಗಳಿಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ಮಳೆಗಾಲದಲ್ಲೂ ರಸ್ತೆಗಳು ಹಾಳಾಗುತ್ತಿದ್ದು, ಪಂಚಾಯಿತಿ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೈಲ್ವೇ ಇಲಾಖೆಯ ನಿರ್ಲಕ್ಷ್ಯ
ಹಲವಾರು ವರ್ಷಗಳಿಂದ ಡಾಂಬರೀಕರಣ ಕಾಣದ ಈ ರಸ್ತೆಯ ಅರ್ಧ ಭಾಗವು ಗ್ರಾಮಸಭೆಯ ತೀವ್ರ ಪ್ರತಿಭಟನೆಯ ಫಲವಾಗಿ ಕಾಂಕ್ರೀಟ್ ರಸ್ತೆಯಾಗಿ ಮಾರ್ಪಟ್ಟಿದೆ. ಆದರೆ ಉಳಿದರ್ಧ ಭಾಗದ ಸ್ಥಿತಿ ಗಂಭೀರವಾಗಿದೆ. ಈ ರಸ್ತೆಯ ಸ್ವಲ್ಪ ಭಾಗ ಮೈಲೊಟ್ಟು ಕೊಂಕಣ ರೈಲ್ವೆ ಗೇಟ್ ಬಳಿ ಬರುತ್ತಿದ್ದು, ರೈಲ್ವೇ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಅಲ್ಲಿ ಡಾಂಬರೀಕರಣ ನಡೆದಿಲ್ಲ. ರೈಲ್ವೆ ಗೇಟ್ ಬಳಿ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗಿದ್ದರೂ ಇಲಾಖೆ ಮೌನ ವಹಿಸಿರುವುದಕ್ಕೆ ಸ್ಥಳೀಯರು ಗ್ರಾಮಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಎಲ್ಲೆಂದರಲ್ಲಿ ಹರಡಿ ಬಿದ್ದಿರುವ ಜಲ್ಲಿ ಕಲ್ಲುಗಳು ಮತ್ತು ರಸ್ತೆಯ ಅಂಚಿಗೆ ಹಾಕಿಡಲಾದ ಕಲ್ಲುಗಳು ವಾಹನ ಸವಾರರಿಗೆ ಬಹಳ ಅಪಾಯಕಾರಿಯಾಗಿವೆ. ಸಂಬಂಧಪಟ್ಟವರು ಶೀಘ್ರವೇ ಇದನ್ನು ಸರಿಪಡಿಸದಿದ್ದರೆ ದೊಡ್ಡ ಅನಾಹುತ ಸಂಭವಿಸುವುದು ಗ್ಯಾರಂಟಿ.
— ನಿರಂಜನ್, ಸ್ಥಳೀಯ ನಿವಾಸಿ
ಈಗಾಗಲೇ ಈ ರಸ್ತೆಯ ಸಂಪೂರ್ಣ ಅಭಿವೃದ್ಧಿ ಮತ್ತು ಡಾಂಬರೀಕರಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ಕಡಿಮೆಯಾದ ತಕ್ಷಣವೇ ಕಾಮಗಾರಿ ಹಾಗೂ ಡಾಂಬರೀಕರಣ ಪ್ರಕ್ರಿಯೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ.
— ಮನೋಹರ ಕೋಟ್ಯಾನ್ ಅತಿಕಾರಿಬೆಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷ