ಮಿಯ್ಯರು ಹೆದ್ದಾರಿ ಬದಿಯಲ್ಲಿ ಬುಡ ಕಳೆದುಕೊಂಡ ವಿದ್ಯುತ್ ಕಂಬಗಳು. 
ಉಡುಪಿ

ಭೀತಿಯ ನೆರಳಲ್ಲಿ ಸವಾರರು!

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಾರ್ಕಳ ಬೈಪಾಸ್ ರಸ್ತೆಯಿಂದ ಬಜಗೋಳಿ ಮಾಳವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಕಾರ್ಕಳದ ಮಿಯ್ಯರು ರಸ್ತೆಯಲ್ಲಿ ಸಾಗುವ ಸಾರ್ವಜನಿಕರು ಹಾಗೂ ವಾಹನ ಸವಾರರು ಸದ್ಯದಲ್ಲೇ ಭೀತಿಯ ನೆರಳಿನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ಸಾಗುತ್ತಿರುವುದು ಸಂತಸದ ವಿಷಯವಾದರೂ ಅವೈಜ್ಞಾನಿಕವಾಗಿ ಸ್ಥಳಾಂತರಿಸಲಾದ ವಿದ್ಯುತ್ ಕಂಬಗಳ ಬುಡದಲ್ಲೇ ಚರಂಡಿ ನಿರ್ಮಾಣ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಅಪಾಯ ಎದುರಾಗಿದೆ.

ಬುಡ ಸಂಪೂರ್ಣ ಸಡಿಲ

ರಸ್ತೆ ವಿಸ್ತರಣೆ ಸಂದರ್ಭ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸದಾಗಿ ರಸ್ತೆ ಬದಿಯಲ್ಲೇ ಅಳವಡಿಸಲಾಗಿದೆ. ಆದರೆ, ವಿದ್ಯುತ್ ಕಂಬಗಳನ್ನು ನೆಟ್ಟ ಬೆನ್ನಲ್ಲೇ ಅವುಗಳ ತೀರ ಹತ್ತಿರದಲ್ಲಿ(ಬುಡದಲ್ಲೇ) ಆಳವಾದ ಚರಂಡಿ ನಿರ್ಮಿಸಲಾಗಿದೆ. ಚರಂಡಿ ನಿರ್ಮಾಣಕ್ಕಾಗಿ ಮಣ್ಣು ಅಗೆದಿರುವುದರಿಂದ ಕಂಬಗಳ ಬುಡ ಸಂಪೂರ್ಣ ಸಡಿಲಗೊಂಡಿದ್ದು, ಕಂಬಗಳಿಗೆ ಇದ್ದ ಮಣ್ಣಿನ ಗಟ್ಟಿ ಆಸರೆ ತಪ್ಪಿಹೋಗಿದೆ.

ಮುಂಜಾಗ್ರತಾ ಕ್ರಮ ಅಗತ್ಯ

ರಸ್ತೆ ವಿಸ್ತರಣೆ ಹೆಸರಿನಲ್ಲಿ ಸಾರ್ವಜನಿಕರ ಜೀವದ ಜತೆ ಚೆಲ್ಲಾಟವಾಡುವುದು ಸರಿಯಲ್ಲ. ಮಳೆಗಾಲ ತೀವ್ರಗೊಳ್ಳುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದೋ ವಿದ್ಯುತ್ ಕಂಬಗಳನ್ನು ಮತ್ತಷ್ಟು ಹಿಂದಕ್ಕೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೇಕು ಅಥವಾ ಚರಂಡಿಯಲ್ಲಿರುವ ಕಂಬಗಳ ಬುಡಕ್ಕೆ ಸಿಮೆಂಟ್ ಕಾಂಕ್ರೀಟ್ ಬೆಲ್ಟಿಂಗ್ ಹಾಕಿ ಭದ್ರಪಡಿಸಬೇಕು. ಈಗಾಗಲೇ ಚರಂಡಿ ಬದಿಯಲ್ಲಿದ್ದ ಕಂಬಗಳ ಬುಡದ ಮಣ್ಣು ಅಗೆದು ಹಾಕಲಾಗಿದೆ. ಕೆಲವೊಂದು ಕಂಬಗಳು ವಾಲಿಕೊಂಡಿವೆ. ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರು ವಿದ್ಯುತ್ ಕಂಬಗಳ ಬುಡವನ್ನು ಅಗೆಯುವ ಬದಲಿಗೆ ಕಂಬಗಳ ಬುಡವನ್ನು ಭದ್ರಪಡಿಸುವ ಕಾರ್ಯ ಮಾಡಬೇಕಾಗಿದೆ. ದುರಂತ ಸಂಭವಿಸುವ ಮುನ್ನ ಮೆಸ್ಕಾಂ ಮತ್ತು ಗುತ್ತಿಗೆದಾರರು ಎಚ್ಚೆತ್ತುಕೊಂಡು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ

ಕಾಮಗಾರಿ ನಡೆಸುವಾಗ ಕನಿಷ್ಠ ಸುರಕ್ಷತೆ ಜ್ಞಾನ ಇರಬೇಕಲ್ಲವೇ? ವಿದ್ಯುತ್ ಕಂಬ ನೆಟ್ಟ ಜಾಗದಲ್ಲೇ ಜೆಸಿಬಿ ಹಾಕಿ ಚರಂಡಿ ತೆಗೆದರೆ ಕಂಬ ಹೇಗೆ ಗಟ್ಟಿಯಾಗಿ ನಿಲ್ಲಲು ಸಾಧ್ಯ? ಅನಾಹುತ ನಡೆದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಚಿತವಾಗಿಯೇ ಮೆಸ್ಕಾಂ ಮತ್ತು ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂದು ಮಿಯ್ಯರಿನ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರೆಗುರುಳುವ ಭೀತಿ

ಕರಾವಳಿಯಲ್ಲಿ ಮುಂಗಾರು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಸಂದರ್ಭ ಕಾರ್ಕಳ ಭಾಗದಲ್ಲಿ ಜೋರಾದ ಗಾಳಿ ಮಳೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಕಂಬಗಳ ಬುಡದಲ್ಲೇ ಚರಂಡಿ ಇರುವುದರಿಂದ ಮಳೆ ನೀರು ಹರಿಯುವಾಗ ಕಂಬದ ಬುಡದ ಮಣ್ಣು ಇನ್ನಷ್ಟು ಕೊಚ್ಚಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಯಾವುದೇ ಕ್ಷಣದಲ್ಲಿ ಜೋರಾಗಿ ಗಾಳಿ ಬೀಸಿದರೆ ವಿದ್ಯುತ್ ಕಂಬಗಳು ರಸ್ತೆಗೆ ಅಥವಾ ಚರಂಡಿಗೆ ಉರುಳುವುದು ಖಂಡಿತ ಎಂದು ಈ ಭಾಗದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆ ವಿಸ್ತರಣೆ ಸಂದರ್ಭ ಕೊಂಚ ದೂರದಲ್ಲಿ ಕಂಬ ಹಾಕಿ ಬುಡವನ್ನು ಗಟ್ಟಿಗೊಳಿಸಿದ್ದರು. ಆದರೆ ಆ ಬಳಿಕ ಜೆಸಿಬಿ ಮೂಲಕ ಚರಂಡಿ ನಿರ್ಮಾಣಕ್ಕೆ ಮಣ್ಣು ಅಗೆದ ಪರಿಣಾಮ ಬಹುತೇಕ ಕಂಬಗಳು ಬುಡ ಕಳೆದುಕೊಂಡು ಚರಂಡಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದೆ.

— ಸದಾಶಿವ, ಸಾರ್ವಜನಿಕರು

ವಿದ್ಯುತ್ ಕಂಬಗಳ ಬುಡದಲ್ಲಿ ಚರಂಡಿ ನಿರ್ಮಿಸಿದ್ದಾರೋ ಅಥವಾ ಚರಂಡಿಯಲ್ಲಿ ಕಂಬವನ್ನು ನೆಟ್ಟಿದ್ದಾರೋ ಎಂದು ಅನುಮಾನವಾಗುತ್ತಿದೆ. ಬಹುತೇಕ ಕಂಬಗಳ ಬುಡ ಮಣ್ಣು ಕಳೆದುಕೊಂಡಿವೆ. ಮಳೆಗಾಲಕ್ಕೆ ಮತ್ತಷ್ಟು ಬುಡ ಸಡಿಲವಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಸೂಕ್ತ ಕ್ರಮ ಅಗತ್ಯ.

— ಸುಜಾತಾ, ಗ್ರಾಮಸ್ಥರು