ಬೃಹತ್ ಹೊಂಡಗಳು ಸೃಷ್ಟಿಯಾಗಿರುವ ಪಳ್ಳತ್ತಡ್ಕ ಅಂತಾರಾಜ್ಯ ರಸ್ತೆಯ ಅವ್ಯವಸ್ಥೆ.
ಪುರುಷೋತ್ತಮ ಪೆರ್ಲ ಕಾಸರಗೋಡು
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯು ಪಳ್ಳತ್ತಡ್ಕದಲ್ಲಿ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ದುಸ್ತರವಾಗಿದೆ. ಚೆರ್ಕಳದಿಂದ ಉಕ್ಕಿನಡ್ಕವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ 33 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದಾಗಿ ಪಳ್ಳತ್ತಡ್ಕ ಭಾಗದಲ್ಲಿ ರಸ್ತೆ ಸಂಚಾರ ವಾಹನ ಚಾಲಕರ ಪಾಲಿಗೆ ನರಕ ಸದೃಶವಾಗಿದೆ.
ವಿಪರ್ಯಾಸವೆಂದರೆ, ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಇಲ್ಲಿನ ಬೃಹತ್ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ತೇಪೆ ಎಲ್ಲ ಕಿತ್ತು ಬಂದು ಮತ್ತೆ ಗುಂಡಿಗಳು ಸೃಷ್ಟಿಯಾಗಿವೆ. ಪಳ್ಳತ್ತಡ್ಕ ಸೇತುವೆ ಸಮೀಪದಲ್ಲಿ ಉಂಟಾಗಿರುವ ಹೊಂಡಗಳಿಂದ ಸೇತುವೆಯೇ ಅಪಾಯಕಾರಿ ಸ್ಥಿತಿಯತ್ತ ಸಾಗಿದೆ. ಭಾರಿ ವಾಹನಗಳು ಸಂಚರಿಸುವಾಗ ಸೇತುವೆ ಕಂಪಿಸುತ್ತಿದೆ. ಸೇತುವೆ ತಳಭಾಗದ ಕಾಂಕ್ರೀಟ್ ಕುಸಿದು ಬೀಳುತ್ತಿದ್ದು, ಸೇತುವೆ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಇದೀಗ ಸೇತುವೆಯಂಚಿನ ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಹೊಂಡಗಳು ಸೇತುವೆಗೆ ಮತ್ತಷ್ಟು ಅಪಾಯಕಾರಿಯಾಗಿದೆ.
ಪ್ರಮುಖ ಸಂಪರ್ಕ ಕೊಂಡಿ: ರಸ್ತೆಯ ಅಲ್ಲಲ್ಲಿ ಸೃಷ್ಟಿಯಾಗಿರುವ ಬೃಹತ್ ಗುಂಡಿಗಳಿಂದಾಗಿ ದ್ವಿಚಕ್ರವಾಹನ ಸವಾರರು ಹಾಗೂ ರಿಕ್ಷಾ ಚಾಲಕರು ಸರ್ಕಸ್ ಮಾಡುತ್ತ ಹರಸಾಹಸದಿಂದ ಸಂಚರಿಸುವಂತಾಗಿದೆ. ಕಾಸರಗೋಡಿನಿಂದ ಚೆರ್ಕಳ-ಬದಿಯಡ್ಕ ಹಾದಿಯಾಗಿ ಪುತ್ತೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಿಗೆ ತೆರಳಲು ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಪಳ್ಳತ್ತಡ್ಕದಲ್ಲಿ ಸೇತುವೆ ಹಾಗೂ ರಸ್ತೆಯ ಅವ್ಯವಸ್ಥೆ ವಾಹನ ಸವಾರರಿಗೆ ಅಪಾಯದ ಗಂಟೆ ಬಾರಿಸುತ್ತಿದೆ. ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ಇದೇ ಪ್ರಮುಖ ರಸ್ತೆಯಾಗಿದೆ. ಶೀಘ್ರ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಸಂಚಾರವನ್ನು ಸುಗಮಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೆರ್ಲ ಭಾಗದಿಂದ ಕಾಸರಗೋಡು, ನೀರ್ಚಾಲು, ಸೀತಾಂಗೋಳಿ, ಕುಂಬಳೆಗೆ ತೆರಳುವ ಖಾಸಗಿ ವಾಹನಗಳು ಪಳ್ಳತ್ತಡ್ಕ ರಸ್ತೆ ಬಿಟ್ಟು ಏಳ್ಕಾನ-ಮುಂಡಿತ್ತಡ್ಕ ಮಾರ್ಗ ಅಥವಾ ಬೆದ್ರಂಪಳ್ಳ-ಪುತ್ತಿಗೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಕೋಟ್ಯಂತರ ರೂ. ವೆಚ್ಚದಲ್ಲಿ ಚೆರ್ಕಳದಿಂದ ಉಕ್ಕಿನಡ್ಕವರೆಗೆ ನಡೆಸಲಾಗಿದ್ದ ಕಾಮಗಾರಿ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷೃ ಹಾಗೂ ಅವೈಜ್ಞಾನಿಕ ನಿರ್ಮಾಣದಿಂದ ಕೆಲವೇ ತಿಂಗಳಲ್ಲಿ ಶಿಥಿಲಾವಸ್ಥೆಗೆ ತಲುಪಿದೆ.
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ಚೆರ್ಕಳದಿಂದ ಉಕ್ಕಿನಡ್ಕವರೆಗಿನ ರಸ್ತೆಯನ್ನು 33 ಕೋಟಿ ರೂ. ವೆಚ್ಚದಲ್ಲಿ ‘ಕಿಫ್ಬಿ’ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲವು ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಆ.18ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ನಂತರ ಕಾಮಗಾರಿ ಆರಂಭಿಸಲಾಗುವುದು.
— ಸಿ.ಜೆ.ಕೃಷ್ಣನ್, ಮಹಾಅಭಿಯಂತ, ಕಿಫ್ಬಿ ಕಾಸರಗೋಡು