Auto 
ಉಡುಪಿ

ಕಟಪಾಡಿಯಲ್ಲಿ ಕಳ್ಳತನವಾದ ರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ

ಬೆಳ್ತಂಗಡಿ: ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಕಳವಾಗಿದ್ದ ರಿಕ್ಷಾ ಬೆಳ್ತಂಗಡಿ ನಗರದ ಮೂರು ಮಾರ್ಗದಲ್ಲಿ ಸೋಮವಾರ ಪತ್ತೆಯಾಗಿದೆ.
ಕಟಪಾಡಿಯ ಮಹಮ್ಮದ್ ಆಸೀಫ್ ಎಂಬುವರ ರಿಕ್ಷಾವನ್ನು ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ಕಳವು ಮಾಡಿ ಬೆಳ್ತಂಗಡಿಯ ಮೂರು ಮಾರ್ಗ ಬಳಿ ಇಟ್ಟು ಹೋಗಿದ್ದಾರೆ. ರಿಕ್ಷಾ ನಿಂತಿರುವುದನ್ನು ನೋಡಿದ ಪಕ್ಕದ ಹೋಟೆಲ್ ಮಾಲೀಕರು ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ರಿಕ್ಷಾದ ನಂಬರ್ ಪರಿಶೀಲಿಸಿದಾಗ, ಆಟೋ ಕಟಪಾಡಿಯ ಮಹಮ್ಮದ್ ಆಸೀಫ್ ಅವರದು ಎನ್ನುವುದು ಗೊತ್ತಾಗಿದ್ದು, ಅವರನ್ನು ಬೆಳ್ತಂಗಡಿಗೆ ಕರೆಸಿ ಆಟೋ ರಿಕ್ಷಾ ನೀಡಲಾಗಿದೆ.

ಆಟೋದಲ್ಲಿ ಕೀ ಬಿಟ್ಟಿದ್ದರು

ಆಟೋ ಮಾಲೀಕರು, ಭಾನುವಾರ ಸಂಜೆ ಕುಟುಂಬದ ಜತೆಗೆ ಬೀಚ್‌ಗೆ ತೆರಳಿ ಹಿಂದಿರುಗಿ ಮನೆಗೆ ಬರುವಾಗ, ಕೀ ಮರೆತು ಆಟೋದಲ್ಲಿ ಬಿಟ್ಟಿದ್ದರು. ರಿಕ್ಷಾದಲ್ಲೇ ಇದ್ದ ಕೀಯಿಂದಾಗಿ ಕಳ್ಳ ಸುಲಭ ರಿಕ್ಷಾ ಕದ್ದು ತಂದಿದ್ದ. ಗ್ಯಾಸ್ ಚಾಲಿತ ರಿಕ್ಷಾವಾಗಿದ್ದು, ಬೆಳ್ತಂಗಡಿ ತಲುಪುತ್ತಿದ್ದಂತೆ ಗ್ಯಾಸ್ ಖಾಲಿಯಾಗತೊಡಗಿದೆ. ಹೀಗಾಗಿ ಕಳ್ಳ, ನಿಲ್ಲಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆಟೋದಲ್ಲಿ ಡೀಸೆಲ್ ಕ್ಯಾನ್ ಹಾಗೂ ಬೀಗಗಳು ಪತ್ತೆಯಾಗಿವೆ. ಈ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು.