ಕುಕ್ಕೆಶ್ರೀ ಆಟೋ ಚಾಲಕ ಮಾಲೀಕರ ಸಂಘದ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಹರೀಶ್‌ಎಸ್.ಇಂಜಾಡಿ, ಆಂಜನೇಯ ರೆಡ್ಡಿ, ಅಶೋಕ್ ನೆಕ್ರಾಜೆ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ರಿಕ್ಷಾ ಚಾಲಕರು ಕಷ್ಟ ಪರಿಶ್ರಮದ ದುಡಿಮೆಯೊಂದಿಗೆ ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಾ ಬರುವ ನಿಷ್ಠಾವಂತರು. ತುರ್ತು ಸಂದರ್ಭದಲ್ಲಿ ಹಗಲಿರುಳನ್ನೂ ಲೆಕ್ಕಿಸದೆ ಸೇವೆ ನೀಡಿ ಜನರ ಪ್ರೀತಿ ಸಂಪಾದಿಸಿದ್ದಾರೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಶ್ಲಾಘಿಸಿದರು.
ಸುಬ್ರಹ್ಮಣ್ಯದ ಕುಕ್ಕೆಶ್ರೀ ಆಟೋ ಚಾಲಕ ಮಾಲೀಕರ ಸಂಘದ 15ನೇ ವಾರ್ಷಿಕೋತ್ಸವ ಪ್ರಯುಕ್ತ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎನ್. ಅಧ್ಯಕ್ಷತೆ ವಹಿಸಿದ್ದರು.
ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಸಂಘದ ಕಾನೂನು ಸಲಹೆಗಾರ ಎಂ.ವೆಂಕಪ್ಪ ಗೌಡ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾ.ಪಂ. ನಿಕಟಪೂರ್ವಾಧ್ಯಕ್ಷೆ ಸುಜಾತಾ ಕಲ್ಲಾಜೆ, ಸಂಘದ ಅಧ್ಯಕ್ಷ ಸಂತೋಷ್ ಕುಲ್ಕುಂದ, ಕಾರ್ಯದರ್ಶಿ ರಮಾಕಾಂತ್ ಕಾಮತ್ ಉಪಸ್ಥಿತರಿದ್ದರು. ಜಯಂತ್ ಸ್ವಾಗತಿಸಿದರು. ರಾಜೇಶ್ ಎನ್.ಎಸ್., ರತ್ನಾಕರ ಸುಬ್ರಹ್ಮಣ್ಯ, ದೀಪಕ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.
ಗೌರವಾರ್ಪಣೆ, ನೆರವು ಹಸ್ತಾಂತರ
ನಿವೃತ್ತ ಸೈನಿಕ ನವೀನ್ ಕುಮಾರ್ ಕೆ., ರಾಷ್ಟ್ರಮಟ್ಟದ ನೆಟ್‌ಬಾಲ್‌ನಲ್ಲಿ ಚಿನ್ನದ ಪದಕ ವಿಜೇತೆ ತಪಸ್ಯಾ ಎಸ್.ನಾಯಕ್, ರಾಷ್ಟ್ರಮಟ್ಟದ ವೇಯ್ಟಲಿಫ್ಟರ್ ಗಣೇಶ್ ಕಕ್ಕೆಪದವು ಪರವಾಗಿ ಅವರ ತಾಯಿಯನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಅಕ್ಷರಿ ಆರ್.ಎಸ್., ಭವಿಷ್ ಕುಮಾರ್ ಎಸ್., ಆತ್ಮಿಕ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಸದಸ್ಯ ಅಶೋಕ್ ನೆಕ್ರಾಜೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಕ್ಷರ ನಿಧಿ ಯೋಜನೆಯಡಿ ಮಂಗಳಾ ಕಿಣಿ ಅವರಿಗೆ ಸಹಾಯಧನ ನೀಡಲಾಯಿತು. ವಾರ್ಷಿಕ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು.