ಆಟೋ ರಿಕ್ಷಾಗೆ ಕಾರು ಡಿಕ್ಕಿಯಾಗಿ ರಿಕ್ಷಾ ಚಾಲಕ ನಾರಂಪಾಡಿ ಪಳ್ಳ ನಿವಾಸಿ ಅನೀಶ್ (22) ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಾತ್ರಿ 7.30ರ ವೇಳೆಗೆ ನಾರಂಪಾಡಿ ಬಳಿಯ ನೆಲ್ಯಡ್ಕ ಎಂಬಲ್ಲಿ ಅಪಘಾತ ಸಂಭವಿಸಿದೆ.
ಕಣಜದ ಹುಳು ದಾಳಿ, ಕಾರ್ಮಿಕ ಮೃತ್ಯು
ಕಾಸರಗೋಡು: ಕಣಜದ ಹುಳುವಿನ ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಳಿಪರಂಬ ತಲೋರ ಅಂಗನವಾಡಿ ಸಮೀಪದ ನಿವಾಸಿ ತುಂಡಿ ವಳಪ್ಪಿಲ್ ಗೋಕುಲ ದಾಸ್(47) ಸೋಮವಾರ ಮೃತಪಟ್ಟಿದ್ದಾರೆ. ಗೋಕುಲ್‌ದಾಸ್ ಅವರಿಗೆ ಶನಿವಾರ ಕಣಜದ ಹುಳು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಳಿಪರಂಬ ಪಯ್ಯಕುಳಂಗರ ಎಂಬಲ್ಲಿ ಕಾಪಾಲಿಕುಳಂಗರ ದೇವಸ್ಥಾನ ಸನಿಹದ ನಿವಾಸಿ ಗೋಪಾಲನ್ ಎಂಬುವರ ಮನೆಯಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿದ್ದ ಕಣಜಗಳು ಕಚ್ಚಿದ್ದವು.
ಮನೆಯಲ್ಲಿ ಚಿನ್ನಾಭರಣ ಕಳವು
ಕಾಸರಗೋಡು: ಕುಂಬಳೆ ಕೃಷ್ಣನಗರ ನಿವಾಸಿ, ನಿವೃತ್ತ ಶಿಕ್ಷಕ ಟಿ.ಜೆ.ಥಾಮಸ್ ಹಾಗೂ ಹೋಲಿ ಫ್ಯಾಮಿಲಿ ಶಾಲಾ ಮುಖ್ಯಶಿಕ್ಷಕಿ ಸೋಫಿಯಮ್ಮ ಅವರ ಮನೆ ಬಾಗಿಲು ಒಡೆದು ನುಗ್ಗಿದ ಕಳ್ಳರು ಒಂದೂಕಾಲು ಪವನ್ ಚಿನ್ನಾಭರಣ ಕಳವುಗೈದಿದ್ದಾರೆ. ದಂಪತಿ ಓಣಂ ರಜೆ ಹಿನ್ನೆಲೆಯಲ್ಲಿ ತಳಿಪರಂಬದ ಆಲಕ್ಕೋಡ್‌ನಲ್ಲಿರುವ ತಮ್ಮ ಮನೆಗೆ ಆ.22ರಂದು ತೆರಳಿದ್ದು, ಸೋಮವಾರ ಬೆಳಗ್ಗೆ ಮನೆಗೆ ವಾಪಸಾದಾಗ ಬಾಗಿಲು ಒಡೆದ ಸ್ಥಿತಿಯಲ್ಲಿದ್ದು, ಮನೆಯೊಳಗೆ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು. ಕಪಾಟಿನಲ್ಲಿರಿಸಿದ್ದ ಮುಕ್ಕಾಲು ಪವನ್ ಮತ್ತು ಅರ್ಧ ಪವನ್ ತೂಕದ ಎರಡು ಆಭರಣಗಳು ಕಳವಾಗಿದ್ದವು. ಟಿ.ಜೆ.ಥಾಮಸ್ ನೀಡಿದ ದೂರಿನಂತೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಕಾಂಗ್ರೆಸ್ ನೇತಾರ ಸಾವು
ಕಾಸರಗೋಡು: ಬೈಕ್ ಡಿಕ್ಕಿಯಾಗಿ ಕಾಂಗ್ರೆಸ್ ಪಳ್ಳಿಕೆರೆ ಮಂಡಲ ಸಮಿತಿ ಕಾರ್ಯದರ್ಶಿ ಪಳ್ಳಿಕೆರೆ ತಚ್ಚಂಗಾಡ್ ನಿವಾಸಿ ಕೆ.ಧನಂಜಯನ್ ಕರುವಾಕೋಡ್ (64) ಮೃತಪಟ್ಟಿದ್ದಾರೆ. ಸೂಪರ್ ಮಾರ್ಕೆಟ್‌ನಿಂದ ಭಾನುವಾರ ಸಂಜೆ ಸಾಮಗ್ರಿ ಖರೀದಿಸಿ ತಚ್ಚಂಗಾಡ್ ಸರ್ಕಾರಿ ಹೈಸ್ಕೂಲ್ ಎದುರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಧನಂಜಯನ್ ತಚ್ಚಂಗಾಡ್ ಶಾಲೆ ಸಮೀಪ ಕ್ಯಾಂಟೀನ್ ನಡೆಸುತ್ತಿದ್ದರು.
ಬಸ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ
ಕಾಸರಗೋಡು: ವಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 1.8 ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿ ಅಧಿಕಾರಿಗಳು ಮಂಜೇಶ್ವರದಲ್ಲಿ ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ಭಾನುವಾರ ವಾಹನ ತಪಾಸಣೆ ನಡೆಸುವ ವೇಳೆ ಬಸ್‌ನಲ್ಲಿ ಮದ್ಯ ಪತ್ತೆಯಾಗಿದೆ. ಮದ್ಯ ಸಾಗಾಟಗಾರನ ಮಾಹಿತಿ ಲಭ್ಯವಾಗಿಲ್ಲ. ಅಬಕಾರಿ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್ ನೇತೃತ್ವದ ಅಬಕಾರಿ ದಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.
ಎಂಡಿಎಂಎ ಸಾಗಾಟ ಆರೋಪಿ ಬಂಧನ
ಕಾಸರಗೋಡು: ಆಪರೇಶನ್ ತೂಫಾನ್ ಅಂಗವಾಗಿ ವಿದ್ಯಾನಗರ ಠಾಣೆ ಪೊಲೀಸರು ನಡೆಸಿದ ತಪಾಸಣೆ ವೇಳೆ ಎಂಡಿಎಂಎ ಸಾಗಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹಿದಾಯತ್ ನಗರ ನಿವಾಸಿ, ಪಟ್ಟ ಕನ್ನಿಲ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಿ.ಅಸ್ಮಯಿಲ್(41)ಬಂಧಿತ. ವಿದ್ಯಾನಗರ ಠಾಣೆ ಎಸ್‌ಐ ವಿಜಯನ್ ಮೇಲತ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ 2.11 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಮನೆಯಿಂದ ತೆರಳಿದ್ದಾತ ನಾಪತ್ತೆ
ಕಾಸರಗೋಡು: ಉಪ್ಪಳ ಬಿ.ಟಿ.ರೋಡ್‌ನ ಪ್ರಸಾದ್ ಶೆಟ್ಟಿ(44) ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆ.22ರಂದು ಬೆಳಗ್ಗೆ ಪ್ರಸಾದ್ ಶೆಟ್ಟಿ ಮನೆಯಿಂದ ಹೊರಗೆ ತೆರಳಿದ್ದು ಅನಂತರ ಮರಳಿ ಬಂದಿಲ್ಲವೆಂದು ತಂದೆ ಲಕ್ಷ್ಮಣ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಅವಿವಾಹಿತರಾದ ಪ್ರಸಾದ್ ಶೆಟ್ಟಿ ಈ ಹಿಂದೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.