ನಾವೂರು ಗ್ರಾಮ ಪಂಚಾಯಿತಿ ಬಹುಮಾನದ ಫಲಕ ಅಳವಡಿಸಿರುವುದು.  
ಉಡುಪಿ

ತ್ಯಾಜ್ಯ ಎಸೆಯುವವರ ಮಾಹಿತಿ ನೀಡಿದರೆ ಬಹುಮಾನ

ಇಂದಿರಾ ಎನ್ ಕೆ
ಬೆಳ್ತಂಗಡಿ: ನಾವೂರು ಗ್ರಾಮದ ಕೈಕಂಬ ಸೇತುವೆಯಲ್ಲಿ ದಿನನಿತ್ಯ ಬಳಕೆಯ ತ್ಯಾಜ್ಯ ತಂದು ಸೇತುವೆ ಕೆಳಗೆ ಹರಿಯುವ ನದಿ ನೀರಿಗೆ ಸುರಿಯುವುದರ ಬಗ್ಗೆ ಇತ್ತೀಚೆಗೆ ವಿಜಯವಾಣಿ ವರದಿ ಮಾಡಿತ್ತು. ಎಚ್ಚೆತ್ತ ನಾವೂರು ಗ್ರಾಮ ಪಂಚಾಯಿತಿ ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಫಲಕ ಅಳವಡಿಸಿದೆ.
ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮದಲ್ಲಿ ಉಪಯೋಗಿಸುವ ಪ್ಲಾಸ್ಟಿಕ್, ಹಾಳೆ ತಟ್ಟೆಗಳು, ಪ್ಲಾಸ್ಟಿಕ್ ಚೀಲ, ಬಾಟವಿ, ಲೋಟಗಳು, ಬಿಯರ್ ಬಾಟಟಿಗಳು , ಸ್ಯಾನಿಟರಿ ಪ್ಯಾಡ್, ಮಕ್ಕಳು ಮತ್ತು ಹಾಸಿಗೆ ಹಿಡಿದಿರುವವರ ಡೈಪರ್ಸ್ ಸೇರಿದಂತೆ ಸಲೂನ್‌ಗಳಲ್ಲಿ ಕತ್ತರಿಸಿದ ತಲೆಗೂದಲನ್ನು ಗೋಣಿಯಲ್ಲಿ ತಂದು ನಾವೂರು ಗ್ರಾಮದ ಕೈಕಂಬ ಸೇತುವೆಯಲ್ಲಿ ಸುರಿಯುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ವರದಿ ಮಾಡಲಾಗಿತ್ತು.
ನದಿಗೆ ತ್ಯಾಜ್ಯ ಎಸೆಯುವವರ ಬಗ್ಗೆ ದಾಖಲೆ ಸಮೇತ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದರೆ 1000 ರೂ. ಬಹುಮಾನ ನೀಡುವುದಾಗಿ ನಾಪೂರು ಗ್ರಾಪಂ ಘೋಷಿಸಿದೆ. ತ್ಯಾಜ್ಯ ಎಸೆಯುವವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆಯ ಶಾಶ್ವತ ಫಲಕ ಅಳವಡಿಸಿದೆ. ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಮಾತ್ರ ಕಸ ಎಸೆಯುವವರ ಬಗ್ಗೆ ಮಾಹಿತಿ ದೊರಕಲು ಸಾಧ್ಯ ಎಂಬುವುದು ಸಾರ್ವಜನಿಕರ ಅಭಿಪ್ರಾಯ.