ಉಡುಪಿ: ಬಹಳ ಕಾಲದಿಂದ ನನೆಗುದಿಗೆ ಬಿದ್ದಿರುವ ಪಿಂಚಣಿ ಪರಿಷ್ಕರಣೆ, 1997ರ ಆಗಸ್ಟ್ ತಿಂಗಳಿಗಿಂತ ಮೊದಲಿನ ಪಿಂಚಣಿದಾರರಿಗೆ ಏಕರೂಪದ ಡಿಎ ತಟಸ್ಥೀಕರಣ, 1986ರ ಪೂರ್ವದಲ್ಲಿ ನಿವೃತ್ತರಾದವರಿಗೆ ಎಕ್ಸ್ಗ್ರೇಷಿಯಾ ಪಾವತಿಯಲ್ಲಿ ಹೆಚ್ಚಳ ಹಾಗೂ ನಿವೃತ್ತರಿಗೆ ವೈದ್ಯಕೀಯ ನಗದು ಭತ್ಯೆ ಕೂಡಲೇ ನೀಡಬೇಕು ಎಂದು ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ಎ. ಮಧ್ವರಾಜ ಬಲ್ಲಾಳ ಆಗ್ರಹಿಸಿದರು.
ಉಡುಪಿಯ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ಮುಂಭಾಗದಲ್ಲಿ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘ ಮತ್ತು ಅಖಿಲ ಭಾರತ ನಿವೃತ್ತ ವಿಮಾ ನೌಕರರ ಫೆಡರೇಷನ್ನ ಉಡುಪಿ ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಖಿಲ ಭಾರತ ನಿವೃತ್ತ ವಿಮಾ ನೌಕರರ ಫೆಡರೇಷನ್ನ ಅಧ್ಯಕ್ಷ ಪ.ವಸಂತ ಭಟ್ ಮಾತನಾಡಿ, ಪ್ರತಿ ವರ್ಷವೂ ಆರೋಗ್ಯ ತಪಾಸಣೆಯ ವೆಚ್ಚ ನೀಡುವ ಸೌಲಭ್ಯ, ಮೆಡಿಕ್ಲೇಮ್ ಯೋಜನೆಯಲ್ಲಿ ಸುಧಾರಣೆ ಹಾಗೂ ಈ ಯೋಜನೆಯ ಕಂತಿನ ಮೇಲಿನ ಜಿಎಸ್ಟಿ ದರ ಕಡಿತಗೊಳಿಸಬೇಕು. 80 ವರ್ಷ ಪೂರೈಸಿದ ಪಿಂಚಣಿದಾರರ ಮೂಲ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಎಲ್ಐಸಿಯ ಹಿರಿಯ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ವಿಮಾನೌಕರರ ಸಂಘಟನೆಯ ಸದಸ್ಯ ಸಂಗಾತಿ ಡೆರಿಕ್ ರೆಬೆಲ್ಲೋ ಮತ್ತು ನಿವೃತ್ತ ವಿಮಾ ನೌಕರರ ಫೆಡರೇಷನ್ನ ಕಾರ್ಯದರ್ಶಿ ಎಚ್. ಶುಭಚಂದ್ರ ಹತ್ವಾರ್ ಮಾತನಾಡಿ, ಪಿಂಚಣಿದಾರ ಸದಸ್ಯರಿಗೆ ಬೇಡಿಕೆಗಳ ಕುರಿತು ಹೆಚ್ಚಿನ ವಿವರಣೆ ನೀಡಿದರು. ಎರಡೂ ಸಂಘಟನೆಯ ನೂರಾರು ಸದಸ್ಯರು ಪಾಲ್ಗೊಂಡಿದ್ದರು.