ನಿವೃತ್ತ ಶಿಕ್ಷಕ ಗೋಪಾಲ ಕೃಷ್ಣ ಭಟ್ (ಜಿ.ಕೆ. ಭಟ್) 
ಉಡುಪಿ

ರಿಕ್ಷಾ ಪಲ್ಟಿಯಾಗಿ ನಿವೃತ್ತ ಶಿಕ್ಷಕ ನಿಧನ

ಮೂಡುಬಿದಿರೆ: ಜ್ಯೋತಿನಗರದ ರತನ್ ಗ್ಯಾರೇಜ್ ಎದುರು ಬುಧವಾರ ಸಾಯಂಕಾಲ ಸಂಭವಿಸಿದ ರಿಕ್ಷಾ ಅಪಘಾತದಲ್ಲಿ ವೇಣುಗೋಪಾಲ ಕಾಲನಿ ನಿವಾಸಿ, ನಿವೃತ್ತ ಶಿಕ್ಷಕ ಗೋಪಾಲ ಕೃಷ್ಣ ಭಟ್ (ಜಿ.ಕೆ. ಭಟ್) (64) ಮೃತಪಟ್ಟಿದ್ದಾರೆ.
ಗುರುವಾರ ಕುಟುಂಬದವರೊಂದಿಗೆ ತಿರುಪತಿಗೆ ತೆರಳುವ ಉದ್ದೇಶದಿಂದ ಸಾಮಗ್ರಿ ಖರೀದಿಸಲು ರಿಕ್ಷಾದಲ್ಲಿ ಮೂಡುಬಿದಿರೆಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಒಳರಸ್ತೆಯಿಂದ ಬೈಕೊಂದು ವೇಗವಾಗಿ ಬಂದು ರಸ್ತೆ ದಾಟುವ ಹಂತದಲ್ಲಿದ್ದಾಗ ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಿಕ್ಷಾ ಚಾಲಕ ಬ್ರೇಕ್ ಹಾಕಿದ್ದಾರೆ. ಈ ವೇಳೆ ರಿಕ್ಷಾ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಗೋಪಾಲ ಕೃಷ್ಣ ಭಟ್ ವಾಹನದಿಂದ ಹೊರಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದ ವಿದ್ಯಾರ್ಥಿನಿ ಹಾಗೂ ರಿಕ್ಷಾ ಚಾಲಕ ಗಾಯಗಳಾಗದೆ ಪಾರಾಗಿದ್ದಾರೆ. ಗೋಪಾಲ ಕೃಷ್ಣ ಭಟ್ ಮೂಡುಬಿದಿರೆಯ ವಂದೇ ಮಾತರಂ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿದ್ದರು.
ಕಲ್ಲಬೆಟ್ಟು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೂಡುಬಿದಿರೆಯ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.