ಉಡುಪಿಯ ಕಾಪು ಬಳಿ ರೈಲ್ವೆ ಹಳಿಯಲ್ಲಿ ಅಸಹಾಯಕರಾಗಿದ್ದ ನಿವೃತ್ತ ಲೆಫ್ಟಿನೆಂಟ್​ ಕಮಾಂಡರ್​ನನ್ನು ವಿಶು ಶೆಟ್ಟಿ ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಪೊಲೀಸ್​ ಸಿಬ್ಬಂದಿ ಮಂಜುನಾಥ್​ ಶೆಟ್ಟಿ ಇದ್ದರು. 
ಉಡುಪಿ

ನಿವೃತ್ತ ಲೆಫ್ಟಿನೆಂಟ್​ ಕಮಾಂಡರ್​ನ ರಕ್ಷಣೆ

* ರೈಲ್ವೆ ಹಳಿಯ ಬಳಿ ವಿವಸ್ತ್ರರಾಗಿದ್ದ ತಮಿಳುನಾಡಿನ ಮಾಜಿ ಸೈನಿಕ

ಉಡುಪಿ: ಕಾಪು ತಾಲೂಕಿನ ಅಚ್ಚಡ ರೈಲ್ವೆ ಹಳಿಯ ಬಳಿ ವಿವಸ್ತ್ರರಾಗಿದ್ದ ನಿವೃತ್ತ ಲೆಫ್ಟಿನೆಂಟ್​ ಕಮಾಂಡರ್​ ಶಶಿಶೇಖರ್​ ಠಾಕೂರ್​ (67) ಅವರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ರೈಲ್ವೆ ಹಳಿಯ ಬಳಿ ಹಿರಿಯರೊಬ್ಬರು ಅಸಹಾಯಕ ಸ್ಥಿತಿಯಲ್ಲಿರುವುದಾಗಿ ಲಭಿಸಿದ ಮಾಹಿತಿಯ ಮೇರೆಗೆ ಕಾಪು ಠಾಣೆಯ ಪೊಲೀಸ್​ ಸಿಬ್ಬಂದಿ ಮಂಜುನಾಥ್​ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು. ವಿವಸ್ತ್ರರಾಗಿದ್ದ ವ್ಯಕ್ತಿಯು ನಡೆದಾಡಲಾಗದೆ ದಣಿದು ಕುಳಿತಿದ್ದರು.
ಅವರ ವಿಚಾರಣೆ ನಡೆಸಿದಾಗ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮೇಲ್ನೋಟಕ್ಕೆ ಅವರಿಗೆ ಮರೆವು ಕಾಯಿಲೆ ಅಥವಾ ಖಿನ್ನತೆಗೊಳಗಾದಂತೆ ತೋರುತ್ತಿದ್ದರು. ಅವರ ಬಳಿಯಿದ್ದ ಬ್ಯಾಗ್​ ಪರಿಶೀಲಿಸಿದಾಗ ಗುರುತು ಚೀಟಿ ಪತ್ತೆಯಾಯಿತು. ಅದರಲ್ಲಿ ಅವರು ಸೇನೆಯಲ್ಲಿ ಲೆಫ್ಟಿನೆಂಟ್​ ಕಮಾಂಡರ್​ ಆಗಿ ನಿವೃತ್ತರಾಗಿರುವುದು ಹಾಗೂ ತಮಿಳುನಾಡು ರಾಜ್ಯದವರೆಂಬ ಮಾಹಿತಿ ತಿಳಿಯಿತು. 
ಅವರ ಬ್ಯಾಗ್​ನಲ್ಲಿ ಪ್ಯಾಂಟ್​, ಶರ್ಟ್​ ಹಾಗೂ 47 ಸಾವಿರ ರೂ. ನಗದೂ ಇತ್ತು. ಜಿಲ್ಲೆಯಲ್ಲಿ ಈ ವ್ಯಕ್ತಿಯ ಪರಿಚಯ ಇರುವವರು ಕಾಪು ಠಾಣೆ ಅಥವಾ ಉಡುಪಿ ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.