ಬಾಂಜಾರುಮಲೆಯಲ್ಲಿ ಪರಿಸರ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ನಡೆಯಿತು. ಡಾ.ಶ್ರೀಧರ್ ಭಟ್, ಗಣಪತಿ ಭಟ್ ಕುಳಮರ್ವ ಮೊದಲಾದವರಿದ್ದರು.
ಬೆಳ್ತಂಗಡಿ: ದೈವದತ್ತವಾಗಿ ಪ್ರಕೃತಿಯಲ್ಲಿ ಸಿಗುವ ಉತ್ತಮ ಗಾಳಿ, ನೀರು, ಭೂಮಿಯನ್ನು ಗೌರವಯುತವಾಗಿ ಕಂಡು ಅದನ್ನು ಬಳಕೆ ಮಾಡಬೇಕು. ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿ. ಬಾಂಜಾರು ಮಲೆಯ ಪ್ರಕೃತಿ ಸೌಂದರ್ಯ ಕಾಪಾಡಿಕೊಂಡು ಬರುತ್ತಿರುವ ಇಲ್ಲಿನ ನಾಗರಿಕರು ಎಲ್ಲರಿಗೂ ಮಾದರಿ ಎಂದು ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ್ ಭಟ್ ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ನೆರಿಯ ಗ್ರಾಮದ ಅತ್ಯಂತ ದುರ್ಗಮ ಪ್ರದೇಶವಾದ ಬಾಂಜಾರುಮಲೆಯಲ್ಲಿ ‘ವಂದೇ ಪ್ರಕೃತಿ ಮಾತರಂ’ ಎಂಬ ಪರಿಸರ ಸಂರಕ್ಷಣೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ತಾಲೂಕು ಘಟಕ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಜೀವನಶೈಲಿಗೆ ಪ್ರಕೃತಿಯ ಕೊಡುಗೆ ವರದಾನವಾಗಿದೆ. ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಘಟಕದ ವತಿಯಿಂದ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಕಾರ್ಯದರ್ಶಿ ಸುಭಾಷಿಣಿ, ಸದಸ್ಯರಾದ ರಮೇಶ್ ಮಯ್ಯ, ರಾಮಕೃಷ್ಣ ಭಟ್ ಬದನಾಜೆ, ಅಶ್ವಿಜಾ ಶ್ರೀಧರ್, ತ್ರಿವಿಕ್ರಮ ಹೆಬ್ಬಾರ್, ಪ್ರಕಾಶ ನಾರಾಯಣ್ ರಾವ್, ಅಖಿಲ ಪ್ರಕಾಶ್ ಮಠದ ಮಜಲು ಮತ್ತಿತರರು ಉಪಸ್ಥಿತರಿದ್ದರು. ನವೀನ್ ನೆರಿಯ ಸ್ವಾಗತಿಸಿದರು. ಸ್ಥಳೀಯರನ್ನು ಭೇಟಿಯಾಗಿ ಅಲ್ಲಿನ ಜನಜೀವನದ ಬಗ್ಗೆ, ಸಮಸ್ಯೆಗಳ ಕುರಿತು ಅವಲೋಕನ ನಡೆಸಲಾಯಿತು.