ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಯಕ್ಷಗಾನ ಹಿರಿಯ ಅರ್ಥಧಾರಿ ಜಬ್ಬಾರ್ ಸಮೊ ಅವರಿಗೆ ಯಕ್ಷಮಂಗಳ ಪ್ರಶಸ್ತಿ, ಕೃಷ್ಣಪ್ರಕಾಶ್ ಉಳಿತ್ತಾಯ ಅವರಿಗೆ ಕೃತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಪಿ.ದಯಾನಂದ ಪೈ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಯಕ್ಷಗಾನ ಸಂಪದ್ಭರಿತ ಕಲೆಯಾದರೂ ಕಲಾವಿದರ ಬದುಕು ಮಾತ್ರ ಕಷ್ಟದಲ್ಲಿಯೇ ಇದೆ. ಈ ನಿಟ್ಟಿನಲ್ಲಿ ಸರ್ಕಾರ ವಿಸ್ತೃತ ಯೋಜನೆ ರೂಪಿಸಿ ಕಲಾವಿದರಿಗೆ ಆರ್ಥಿಕ ರಕ್ಷಣೆ ನೀಡಿದಾಗ ಕಲಾಸೇವೆ ಗೌರವಿಸಿದಂತಾಗುತ್ತದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರ ಪ್ರಾಯೋಜಕ ಡಾ.ಪಿ.ದಯಾನಂದ ಪೈ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ, ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗಾನದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ (ಅವರ ಅನುಪಸ್ಥಿತಿಯಲ್ಲಿ ಸಹೋದರ ಮಹಾಬಲ ಹೆಗಡೆ), ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಯಕ್ಷಗಾನ ಹಿರಿಯ ಅರ್ಥಧಾರಿ ಜಬ್ಬಾರ್ ಸಮೊ ಅವರಿಗೆ ಯಕ್ಷಮಂಗಳ ಪ್ರಶಸ್ತಿ, ಕೃಷ್ಣಪ್ರಕಾಶ್ ಉಳಿತ್ತಾಯ ಅವರಿಗೆ ಕೃತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು. ಮೋಹಿನಿ ದಯಾನಂದ ಪೈ, ಮಂಗಳೂರು ವಿವಿ ಕುಲಸಚಿವ ಪ್ರೊ.ಗಣೇಶ್ ಸಂಜೀವ್, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಉಪಸ್ಥಿತರಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಹಾವೇರಿ ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅಭಿನಂದನಾ ಭಾಷಣ ಮಾಡಿದರು. ಡಾ.ಶಶಿರೇಖ, ದೀವಿತ್ ಕೋಟ್ಯಾನ್, ಡಾ.ಶ್ರೀ ದೇವಿ ಕಲ್ಲಡ್ಕ ಸನ್ಮಾನ ಪತ್ರ ವಾಚಿಸಿದರು. ಸಂಶೋಧನಾಧಿಕಾರಿ ಡಾ.ಸತೀಶ್ ಕೊಣಾಜೆ ವಂದಿಸಿದರು. ಕಲಾವಿದೆ ಸಾಯಿಸುಮ ನಾವಡ ನಿರೂಪಿಸಿದರು.
ನೆರವಿನ ಡಿಡಿ ಹಸ್ತಾಂತರ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯಕ್ಷಗಾನ ಸಂಬಂಧಿ ಅಧ್ಯಯನ, ಸಂಶೋಧನೆ ವಿಸ್ತರಿಸುವ ಉದ್ದೇಶಕ್ಕಾಗಿ ಡಾ.ಪಿ.ದಯಾನಂದ ಪೈ ಮೊದಲೇ ನೀಡಿದ್ದ ಭರವಸೆಯಂತೆ ಒಂದು ಕೋಟಿ ರೂ.ಗಳ ಡಿ.ಡಿ. ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರಿಗೆ ಹಸ್ತಾಂತರಿಸಿದರು. ಯಕ್ಷಗಾನ ಕಲಾಕೇಂದ್ರದ ಕಟ್ಟಡದ ಪ್ರತಿಧ್ವನಿ ನಿವಾರಿಸಿ ಮರು ವಿನ್ಯಾಸದ ಖರ್ಚು ಭರಿಸುವ ಭರವಸೆ ನೀಡಿದರು.
ಹಿಂದಿನ ಮಂಗಳೂರು ಸರ್ಕಾರಿ ಕಾಲೇಜು ವಿಶ್ವವಿದ್ಯಾಲಯ ಕಾಲೇಜು ಆಗಿ ರೂಪುಗೊಂಡ ಬಳಿಕ ಕೆಲವು ವರ್ಷಗಳಿಂದ ಆಗುತ್ತಿರುವ ಪ್ರಮಾದ ಆಗಿದ್ದರೂ ಮತ್ತೆ ಗತ ವೈಭವ ಸಾರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಮಂಗಳೂರು ವಿವಿ ಯಕ್ಷಗಾನ, ಭರತನಾಟ್ಯ ಶೈಲಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿಶೇಷ ಪರೀಕ್ಷೆ ನಡೆಸಿ ಯಕ್ಷಗಾನಕ್ಕೆ ಶೈಕ್ಷಣಿಕ ಆಯಾಮ ನೀಡಲು ಚಿಂತನೆ ನಡೆದಿದೆ.