ಉಡುಪಿ: ಪ್ರಜಾಸೇವೆ ಆಂದೋಲನಾ ಸಭೆಯಲ್ಲಿ ಸಾರ್ವಜನಿಕರು ನೀಡಿರುವ ತಮ್ಮ ಸಮಸ್ಯೆಗಳ ಅಹವಾಲುಗಳನ್ನು ಸಂಬಂಧಿತ ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಅನಗತ್ಯ ವಿಳಂಬ ಮಾಡದೆ ಪ್ರಾಮಾಣಿಕವಾಗಿ ಬಗೆಹರಿಸಿ ಹಿಂಬರಹ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ನ.11) ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯಲ್ಲಿ ಈವರೆಗೆ ನಡೆದ ಪ್ರಜಾಸೇವೆ ಆಂದೋಲನಾ ಸಭೆಯಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಅರ್ಜಿಗಳ ಹಂಚಿಕೆ ಮಾಡಿ
ಸ್ವೀಕೃತ ಅರ್ಜಿಗಳು ವಿಷಯಾಧಾರಿತವಾಗಿ ಯಾವ ಇಲಾಖೆ ಬರುತ್ತದೆ ಎಂದು ತಿಳಿದು ಕೂಡಲೇ ಅವುಗಳನ್ನು ವಿಲೇವಾರಿ ಮಾಡಬೇಕು. ಒಂದೊಮ್ಮೆ ಅವು ತಮ್ಮ ಇಲಾಖೆಯ ವ್ಯಾಪ್ತಿಗೆ ಬರದಿದ್ದಲ್ಲಿ ಅಥವಾ ಇನ್ನಿತರ ತಾಲೂಕು ವ್ಯಾಪ್ತಿಗೆ ಒಳಪಟ್ಟಿದ್ದಲ್ಲಿ ತಕ್ಷಣವೇ ಸಂಬಂಧಪಟ್ಟ ತಾಲೂಕು ಅಥವಾ ಇಲಾಖೆಗೆ ಹಂಚಿಕೆ ಮಾಡಬೇಕು. ಈ ಸಣ್ಣ ಕಾರ್ಯಕ್ಕೂ ಅನಗತ್ಯ ಸಮಯ ಹಾಳು ಮಾಡಬೇಡಿ ಎಂದರು.
ಸಮರ್ಪಕವಾಗಿ ಉತ್ತರಿಸಿ
ಸಾರ್ವಜನಿಕರಿಗಿರುವ ಸಮಸ್ಯಾತ್ಮಕ ಅರ್ಜಿಗಳಿಗೆ ಕೆಳ ಹಂತದಲ್ಲಿಯೇ ಬಗೆಹರಿಸುವಂತಾಗಬೇಕು. ಹೀಗಾಗಿ ಕೂಡಲೇ ಸ್ಪಂದಿಸಿ, ಪರಿಹಾರ ಕಂಡುಕೊಳ್ಳಬೇಕು. ಐಪಿಜಿಆರ್ಎಸ್ ಪೋರ್ಟಲ್ನಲ್ಲಿ ಅದನ್ನು ನಮೂದಿಸಬೇಕು. ಒಂದೊಮ್ಮೆ ನಿಯಮಾನುಸಾರ ಕೆಲವು ಸಮಸ್ಯೆ ಬಗೆಹರಿಸಲು ಆಗದಿದ್ದಲ್ಲಿ ಅದರ ಕುರಿತು ಸಕಾರಾತ್ಮಕವಾಗಿ ಉತ್ತರ ನೀಡಬೇಕು. ಅಸಂಬದ್ಧವಾಗಿ ಮಾತನಾಡಕೂಡದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಎಎಸ್ಪಿ ಸುಧಾಕರ ನಾಯಕ, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೊಳ್ಳಿ, ಸಹಾಯಕ ಕಮಿಷನರ್ ಮಹೇಶ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.
ಜನಸಾಮಾನ್ಯರು ಒಂದೇ ಅರ್ಜಿಯಲ್ಲಿ ತಮ್ಮ ಅನೇಕ ಸಮಸ್ಯೆ ನಮೂದಿಸಿರುವುದು ಕಂಡು ಬರುತ್ತಿದೆ. ಅರ್ಜಿಗಳನ್ನು ಪಡೆಯುವಾಗ ಪ್ರತಿಯೊಂದು ಸಮಸ್ಯೆಗಳಿಗೂ ಪ್ರತ್ಯೇಕ ಅರ್ಜಿ ಪಡೆದು ಸಂಬಂಧಪಟ್ಟ ಇಲಾಖೆಗಳಿಗೆ ಅವುಗಳನ್ನು ಹಸ್ತಾಂತರಿಸಿ ಬಗೆಹರಿಸಲು ಕ್ರಮಕೈಗೊಳ್ಳಬೇಕು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಎಚ್ಚರವಹಿಸಬೇಕು.ಸ್ವರೂಪಾ ಟ.ಕೆ. ಉಡುಪಿ ಜಿಲ್ಲಾಧಿಕಾರಿ.