ಚಿಟ್ಟಿಬೆಟ್ಟು ಕೊರಗ ಕಾಲನಿಯ ಮನೆಗಳಿಗೆ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಭೇಟಿ ನೀಡಿದರು. ಪ್ರಮುಖರಾದ ರವೀಂದ್ರ ರಾವ್, ಸತೀಶ್ ಕುಂದರ್, ಸರಸ್ವತಿ ಪೂಜಾರಿ ಮೊದಲಾದವರಿದ್ದರು.
ಕೋಟ: ರಾಜ್ಯದಲ್ಲಿ ಬುಡಕಟ್ಟು ಮೂಲನಿವಾಸಿಗಳ 50 ಪಂಗಡಗಳಿದ್ದು, ಒಟ್ಟು ನಲವತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದೇವೆ, ಆದರೆ ಸರ್ಕಾರದ ಮೀಸಲಾತಿ ಪಡೆಯುವಾಗ ಅನ್ಯಾಯಕ್ಕೆ ಒಳಗಾಗಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.
ಕೋಟತಟ್ಟು ಪಂಚಾಯಿತಿ ವತಿಯಿಂದ ನಿರ್ಮಾಣಗೊಂಡ ಚಿಟ್ಟಿಬೆಟ್ಟು ಕೊರಗ ಕಾಲನಿ ಎಂಟು ಮನೆಗಳಿಗೆ ಶನಿವಾರ ಭೇಟಿ ನೀಡಿ ಮಾತನಾಡಿದರು.
ಸುಪ್ರೀಂ ಕೋರ್ಟ್ ನಿರ್ದೇಶನದ ಆಧಾರದ ಮೇಲೆ ಪ್ರತ್ಯೇಕ ನಿಯೋಗ ರಚಿಸಿ, ಅಧ್ಯಯನ ಮಾಡಿ ನಮ್ಮ ಜನಾಂಗಕ್ಕೆ ಏನೇನು ಸೌಲಭ್ಯ ಅನುದಾನ ಒದಗಿಸಲು ವೈಜ್ಞಾನಿಕ ಚಿಂತನೆ ಮಾಡಲು ಮನವಿ ಮಾಡಿದ್ದೇನೆ. ಪ್ರಸ್ತುತ ಸಣ್ಣ ಸಣ್ಣ ಸಮುದಾಯಗಳು ಸೌಲಭ್ಯದಿಂದ ವಂಚಿತವಾಗುತ್ತಿದೆ, ಈ ದಿಸೆಯಲ್ಲಿ ಒಳ ಮಿಸಲಾತಿ ಸಮರ್ಪಕಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದೇವೆ, ಸದನದಲ್ಲೂ ಪ್ರಸ್ತಾಪ ಮಾಡಿದ್ದೇವೆ ಎಂದರು.
ಕೋಟತಟ್ಟು ಪಿಡಿಒ ರವೀಂದ್ರ ರಾವ್, ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಂದರ್, ಮಾಜಿ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಮಾಜಿ ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ವಿದ್ಯಾ ಸಾಲ್ಯಾನ್, ಸೀತಾ, ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಕಾಂಚನ್, ಪ್ರಮುಖರಾದ ಕೊತ್ತಾಡಿ ಅಜಿತ್ ಶೆಟ್ಟಿ, ಸುರೇಶ್ ಸಮತಾ, ರತ್ನಾಕರ ಬಾರಿಕೆರೆ, ಕೊರಗ ಸಮುದಾಯದ ಮುಖಂಡ ಗಣೇಶ ಕುಂಭಾಶಿ, ಸ್ಥಳೀಯ ರವಿ ಮತ್ತಿತರರಿದ್ದರು.