ಉಡುಪಿ: ಮಣಿಪಾಲದ ಮಾಹೆಯಲ್ಲಿ ನೇಚರ್ ಸಮ್ಮೇಳನ ಆಯೋಜಿಸಿರುವುದರಿಂದ ವಿವಿಧ ಕ್ಷೇತ್ರ ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರು ಹಾಗೂ ತಜ್ಞರಿಗೆ ಸೂಕ್ತ ವೇದಿಕೆ ಲಭಿಸಿದೆ. ಸಾಂಕ್ರಾಮಿಕ ರೋಗಗಳು ಸಂಕೀರ್ಣ ಸವಾಲು ಒಡ್ಡಲಿದ್ದು ಅವುಗಳನ್ನು ಎದುರಿಸಲು ವೈಜ್ಞಾನಿಕ ಸಹಯೋಗ, ನಿರಂತರ ಸಂಶೋಧನೆ ಮತ್ತು ಜ್ಞಾನದ ವಿನಿಮಯ ಅಗತ್ಯ ಎಂದು ಮಣಿಪಾಲದ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ತಿಳಿಸಿದರು.
ಉಡುಪಿ ಮಣಿಪಾಲದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನಲ್ಲಿ ಆಯೋಜಿಸಿದ್ದ 'ಬದಲಾಗುತ್ತಿರುವ ಜಗತ್ತಿನಲ್ಲಿ ಸಾಂಕ್ರಾಮಿಕ ರೋಗಗಳ ಸವಾಲನ್ನು ಎದುರಿಸುವುದು' ಎಂಬ ಭಾರತದಲ್ಲಿ ನಡೆದ ಎರಡನೇ ನೇಚರ್ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವೈಜ್ಞಾನಿಕ ಜ್ಞಾನ ಅಗತ್ಯ
ನೇಚರ್ ಹೆಲ್ತ್ನ ಹಿರಿಯ ಸಂಪಾದಕ ಲೊರೆಂಜೊ ರಿಗೆಟ್ಟೊ ಮಾತನಾಡಿ, ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ವೈಜ್ಞಾನಿಕ ಜ್ಞಾನ ಬೇಕು. ಹೊಸದಾಗಿ ಹೊರಹೊಮ್ಮುತ್ತಿರುವ ರೋಗಕಾರಕ, ಆಂಟಿಮೈಕ್ರೊಬಿಯಲ್ ಪ್ರತಿರೋಧ, ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವ ವ್ಯಾಪಕ ಪರಿಸರ ಅಂಶಗಳ ಆಳವಾದ ತಿಳಿವಳಿಕೆ ಅಗತ್ಯ. ಇದಕ್ಕೆ ನೇಚರ್ ಸಮ್ಮೇಳನ ವೇದಿಕೆಯಾಗಿದೆ ಎಂದರು.
ಸಮ್ಮೇಳನದಲ್ಲಿ ಮುಖ್ಯ ಭಾಷಣ, ಸಂಶೋಧನಾ ಪ್ರಸ್ತುತಿ, ಪೋಸ್ಟರ್ ಅಧಿವೇಶನ ನಡೆದವು. ಅವುಗಳಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಸಂಶೋಧನೆ ಮತ್ತು ಪರಿಸರ ವಿಜ್ಞಾನ ಕ್ಷೇತ್ರಗಳ ತಜ್ಞರು ಅಭಿಪ್ರಾಯ ಹಂಚಿಕೊಂಡರು. ರೋಗಗಳ ಮೇಲ್ವಿಚಾರಣಾ ವ್ಯವಸ್ಥೆ, ರೋಗ ಪತ್ತೆಹಚ್ಚುವ ಸಾಮರ್ಥ್ಯ ಸುಧಾರಣೆ, ಚಿಕಿತ್ಸೆ ಮತ್ತು ರೋಗ ತಡೆಗಟ್ಟುವಿಕೆಯ ಕಾರ್ಯತಂತ್ರಗಳ ಅಭಿವೃದ್ಧಿ, ಪರಿಸರ ಬದಲಾವಣೆ, ಸಾಂಕ್ರಾಮಿಕ ರೋಗಗಳ ಅಪಾಯದ ತಿಳಿವಳಿಕೆ ಕುರಿತು ವೈಜ್ಞಾನಿಕ ಚರ್ಚೆ ನಡೆದವು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಲಾರೆನ್ ಗಾರ್ಡ್ನರ್, ಮೆಕ್ಗಿಲ್ ವಿಶ್ವವಿದ್ಯಾಲಯದ ಮಧುಕರ ಪೈ, ವಿಟ್ವಾರ್ಟಸ್ರ್ಯಾಂಡ್ ವಿಶ್ವವಿದ್ಯಾಲಯದ ಶಬೀರ್ ಎ. ಮಧಿ, ಎರಾಸ್ಮಸ್ ವಿಶ್ವವಿದ್ಯಾಲಯ ರೋಟರ್ಡ್ಯಾಮ್ನ ಮರಿಯನ್ ಕೂಪ್ಮಾನ್ಸ್ ಇವರು ಕೋವಿಡ್ ನಂತರದ ಯುಗ, ಕ್ಷಯ ರೋಗ, ಮಕ್ಕಳ ರಕ್ಷಣೆ, ಸಾಂಕ್ರಾಮಿಕ ರೋಗದ ಏಕಾಏಕಿ ಹರಡುವಿಕೆ ಕುರಿತು ಮಾತನಾಡಿದರು.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಸೂಕ್ಷ್ಮಜೀವ ವಿಜ್ಞಾನಿಗಳು, ವೈದ್ಯಕೀಯ ತಜ್ಞರು, ಸಾರ್ವಜನಿಕ ಆರೋಗ್ಯ ಪರಿಣತರು ಮತ್ತು ಪರಿಸರ ವಿಜ್ಞಾನಿಗಳು ಪಾಲ್ಗೊಂಡಿದ್ದರು.