ಉಡುಪಿ: ಆರೋಗ್ಯದಲ್ಲಿ ಏರುಪೇರಾಗಿ ಗಂಭೀರ ಅಸ್ವಸ್ಥಗೊಂಡು ವೃದ್ಧಾಶ್ರಮದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧರೊಬ್ಬರನ್ನು ರಕ್ಷಿಸಲಾಗಿದೆ.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು 112 ತುರ್ತು ಸಹಾಯವಾಣಿಯ ಸಿಬ್ಬಂದಿ ಸಂತೋಷ ಠಾಥೋಡ ಸಹಕಾರದಲ್ಲಿ ಅಜ್ಜರಕಾಡುನಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜೋಡುಕಟ್ಟೆ ಸಮೀಪದಲ್ಲಿರುವ ಖಾಸಗಿ ವೃದ್ಧಾಶ್ರಮದಲ್ಲಿ ಗುಜರಾತ ರಾಜ್ಯದ ರಾಜಕೋಟ ನಿವಾಸಿ ಕಮಲಾಸನನ್ ಪುಷ್ಕರನ್ (71) ಎಂಬವರು ವಾಸವಿದ್ದು, ಕಟ್ಟಡದ 3ನೇ ಮಹಡಿಯ ಕೊಠಡಿಯ ಬಾಗಿಲಿನ ಒಳಗಿನಿಂದ ಚಿಲಕ ಹಾಕಿಕೊಂಡು ಮಲಗಿದ್ದರು. ಬಹಳ ಸಮಯ ಕಳೆದರೂ ಅವರು ಕೊಠಡಿಯಿಂದ ಹೊರಬಂದಿರಲಿಲ್ಲ.
ವೃದ್ಧಾಶ್ರಮದ ಸಿಬ್ಬಂದಿ ಬಾಗಿಲು ತೆರೆಯುವಂತೆ ಪದೇಪದೇ ಕೇಳಿದ್ದಾರೆ. ಅಲ್ಲದೆ, ಬಲವಾಗಿ ಬಡಿದು ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ತಕ್ಷಣವೇ ಸ್ಥಳಕ್ಕಾಗಮಿಸಿದ ತುರ್ತು ಸಹಾಯವಾಣಿ ಸಿಬ್ಬಂದಿ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕೊಠಡಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಕಮಲಾಸನನ್ ಬಿದ್ದಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಪ್ರಾಣಾಪಾಯದಿಂದ ಪಾರು ಮಾಡಿದರು.