ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಯಶ್ಪಾಲ್ ಸುವರ್ಣ, ಎ.ಕಿರಣಕುಮಾರ್ ಕೊಡ್ಗಿ, ಸ್ವರೂಪಾ ಟಿ.ಕೆ., ಪ್ರತೀಕ್ ಬಾಯಲ್, ಅಬೀದ್ ಗದ್ಯಾಳ, ರಶ್ಮಿ ಇತರರಿದ್ದರು.
* ಉಡುಪಿ ಸಂಸದ ಕೋಟ ಪೂಜಾರಿ ಸೂಚನೆ
* ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಸಭೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ನಿಮಾರ್ಣ ಕಾಮಗಾರಿಯಿಂದಾಗಿ ವಿವಿಧ ಗ್ರಾಪಂ ವ್ಯಾಪ್ತಿಯ ಕುಡಿಯುವ ನೀರು ಸರಬರಾಜಿನ ಪೈಪ್ಲೈನ್ ಹಾನಿಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅವುಗಳ ದುರಸ್ತಿ ಹಾಗೂ ಮರುಅಳವಡಿಕೆ ಕಾರ್ಯ ಕೈಗೊಳ್ಳಬೇಕು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆಯಲ್ಲಿ ಆದ ಸಮಸ್ಯೆ ನಿವಾರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಗುರುವಾರ (ಜ.1) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ವಿವಿಧೆಡೆ ನೀರಿನ ಸಮಸ್ಯೆ
ಕುಂದಾಪುರ ತಾಲೂಕಿನ ಕೋಟೇಶ್ವರ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ ಹಾಗೂ ಬ್ರಹ್ಮಾವರದ ಸಾಲಿಗ್ರಾಮ, ಕೋಟತಟ್ಟು, ಕೋಟ, ಮಣೂರು, ಪಾಂಡೇಶ್ವರ ಹಾಗೂ ಸಾಸ್ತಾನ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜಿನ ಪೈಪ್ಲೈನ್ ಅಳವಡಿಸಲಾಗಿದೆ. ಆದರೆ, ಅವಗಳು ರಸ್ತೆ ಕಾಮಗಾರಿಯಿಂದಾಗಿ ಹಾನಿಗೊಂಡು ನರಿಗೆ ನೀರು ಲಭಿಸುತ್ತಿಲ್ಲ. ಹೀಗಾಗಿ ಎಲ್ಲೆಲ್ಲಿ ಹಾನಿಯಾಗಿದೆಯೋ ಅಲ್ಲಿ ಆದ್ಯತೆಯ ಮೇರೆಗೆ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದುರಸ್ತಿ ಮಾಡಿಸಬೇಕು ಎಂದರು.
ಪ್ರತ್ಯೇಕ ಪೈಪ್ಲೈನ್
ರಸ್ತೆ ಅಗಲೀಕರಣ ಕಾಮಗಾರಿಯಿಂದ ಮುಂಬರುವ ದಿನಗಳಲ್ಲಿ ಪೈಪ್ಲೈನ್ ಹಾನಿಗೊಳಗಾಗುವ ಸಾಧ್ಯತೆಗಳಿವೆ. ಅಲ್ಲದೆ, ಪೈಪ್ಲೈನ್ಗಳು ರಸ್ತೆಯ ಕ್ಯಾರೇಜ್ ವೇ ಮಧ್ಯದಲ್ಲಿ ಬರುತ್ತಿದ್ದು, ಪ್ರತ್ಯೇಕ ಪೈಪ್ಲೈನ್ ಅಳವಡಿಕೆಯ ಅವಶ್ಯಕತೆ ಇದೆ. ಅದಕ್ಕೆ ಗ್ರಾಪಂಗಳಲ್ಲಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನದ ಲಭ್ಯತೆ ಇಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ದುರಸ್ತಿ ಸೇರಿದಂತೆ ಇನ್ನಿತರ ಕಾರ್ಯ ಕೈಗೊಳ್ಳಬೇಕಿದೆ. ರಸ್ತೆ ಮಧ್ಯ ಭಾಗದಲ್ಲಿರುವ ಹಾಲಿ ಪೈಪ್ಲೈನ್ಗಳ ಬದಲಿಯಾಗಿ ಸರ್ವೀಸ್ ರಸ್ತೆಯಲ್ಲಿ ಬಾಕಿ ಉಳಿದಿರುವ 2.5 ಮೀಟರ್ ಜಾಗದಲ್ಲಿ ಹೊಸದಾಗಿ ಪೈಪ್ಲೈನ್ ಅಳವಡಿಸುವುದು ಸೂಕ್ತ ಎಂದರು.
ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಎ.ಕಿರಣಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮೀಷನರ್ ರಶ್ಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಯ ಇಂಜಿನಿಯರ್ಗಳು ಉಪಸ್ಥಿತರಿದ್ದರು.
ಪ್ರಸ್ತುತ ದುರಸ್ತಿ ಸೇರಿದಂತೆ ಹೊಸ ಪೈಪ್ಲೈನ್ ಅಳವಡಿಸಲು ತಯಾರಿಸಿರುವ ಅಂದಾಜು ಪಟ್ಟಿಯ ವೆಚ್ಚ ಹೆಚ್ಚಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ಗಳು ಮರು ಪರಿಶೀಲಿಸಿ ಸರಿಯಾಗಿ ಅಂದಾಜು ವೆಚ್ಚ ತಯಾರಿಸಿ ನೀಡಬೇಕು. ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೈಗೊಂಡ ನಿರ್ಣಯದ ನಡಾವಳಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಕಚೇರಿಗೆ ಕಳುಹಿಸಬೇಕು.