ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿದ್ದ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡಲಾಯಿತು.
ಬಂಟ್ವಾಳ: ಬರಿಮಾರು ಗ್ರಾಮದ ಕಲ್ಲೆಟ್ಟಿ ಬಳಿ ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕಿ ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ ಬಂಟ್ವಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗೆ ವಾಲಿದ್ದ ಅಪಾಯಕಾರಿ ಮರಗಳ ಗೆಲ್ಲು ತೆರವುಗೊಳಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ದುರಂತದ ಬಳಿಕ ಬಿ.ಸಿ.ರೋಡ್ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಬದಿ ಬೃಹತ್ ಮರಗಳು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಅಪಾಯ ಉಂಟು ಮಾಡಬಹುದೆಂಬ ಆತಂಕ ವ್ಯಕ್ತವಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಅರಣ್ಯ ಇಲಾಖೆ ಮೇಲಧಿಕಾರಿಗಳ ಸೂಚನೆಯಂತೆ ಶನಿವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆ ಆರಂಭಿಸಲಾಯಿತು.
ಸುರಕ್ಷತಾ ದೃಷ್ಟಿಯಿಂದ ಸಂಚಯಗಿರಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.