ಉಡುಪಿಯಲ್ಲಿ ಆಯೋಜಿಸಿದ್ದ ಡಾ. ಕಾರಂತರ ಜನ್ಮದಿನಾಚರಣೆಯಲ್ಲಿ ಡಾ. ಎಚ್​.ಎಸ್​. ಬಲ್ಲಾಳ್​ ಮಾತನಾಡಿದರು. ಡಾ. ನಾರಾಯಣ ಸಭಾಹಿತ, ಡಾ. ಶ್ರೀಕಾಂತ್​ ರಾವ್​ ಸಿದ್ಧಾಪುರ ಇದ್ದರು. 
ಉಡುಪಿ

ಡಾ. ಕಾರಂತರ ಕೊಡುಗೆಯ ಸ್ಮರಣೆ ಎಲ್ಲರ ಕರ್ತವ್ಯ

* ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಅನಿಸಿಕೆ

* 124ನೇ ಜನ್ಮ ದಿನಾಚರಣೆ, ಯಕ್ಷಗಾನ ಪ್ರದರ್ಶನ

ಉಡುಪಿ: ಕಡಲ ಭಾರ್ಗವ ಖ್ಯಾತಿಯ ಕೋಟ ಶಿವರಾಮ ಕಾರಂತರು ಮೇರು ವ್ಯಕ್ತಿತ್ವ ಹೊಂದಿದವರು. ಇಂದ್ರಾಳಿಯಲ್ಲಿ ಯಕ್ಷಗಾನ ಕೇಂದ್ರ ಸ್ಥಾಪಿಸಿ ಕಲೆಯ ರಕ್ಷಣೆಗೆ ಕೊಡುಗೆ ನೀಡಿದ ಅವರ ಸ್ಮರಣೆ ಎಲ್ಲರ ಕರ್ತವ್ಯ. ಸಾಹಿತ್ಯ ಕ್ಷೇತ್ರಕ್ಕೂ ಅನನ್ಯ ಕೊಡುಗೆ ನೀಡಿರುವ ಕಾರಂತರ ಸ್ಮರಣಾರ್ಥ ಪ್ರತಿವರ್ಷವೂ ಜನ್ಮದಿನಾಚರಣೆ ಆಚರಿಸಿ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಿದ್ದೇವೆ ಎಂದು ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ತಿಳಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ ವತಿಯಿಂದ ಶನಿವಾರ (ಅ.10) ಸಂಜೆ ಆಯೋಜಿಸಿದ್ದ ಡಾ. ಕೆ. ಶಿವರಾಮ ಕಾರಂತ ಅವರ 124ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಶ್ರೀಕಾಂತ್​ ರಾವ್​ ಸಿದ್ಧಾಪುರ ಮಾತನಾಡಿದರು.

ಅಂತರಂಗದಲ್ಲಿತ್ತು ಆತ್ಮೀಯತೆ

ಉಡುಪಿ ಪೂರ್ಣಪ್ರಜ್ಞ ಕಾಲೇಜ್​ನ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ್​ ರಾವ್​ ಸಿದ್ಧಾಪುರ ಅವರು ಕಾರಂತರ ವ್ಯಕ್ತಿತ್ವದ ಕುರಿತು ಮಾತನಾಡಿ, ಸಿಡುಕು ಸ್ವಭಾವ ಹೊಂದಿದ್ದರೂ ಅಂತರಂಗದಲ್ಲಿ ತುಂಬ ಆತ್ಮೀಯತೆ ಹೊಂದಿದ್ದರು. ಸರಳ ಸಾಹಿತಿಯಾಗಿ ಜೀವನಾನುಭವಕ್ಕೆ ಆದ್ಯತೆ ನೀಡುತ್ತಿದ್ದರು. ಕುತೂಹಲ ಹಾಗೂ ಸಂಶೋಧನಾ ಪ್ರವೃತ್ತಿ ಅವರ ವಿಶೇಷತೆಯಾಗಿತ್ತು. ಯಕ್ಷಗಾನ ಕಲಿಯಲು ಬರುತ್ತಿದ್ದ ಶಿಷ್ಯರು ನಿರೀಕ್ಷೆಯಂತೆ ಅಭಿನಯಿಸದಿದ್ದಾಗ ಭಾವನಾತ್ಮಕವಾಗಿ ಕೋಪ ತೋರುತ್ತಿದ್ದರು. ಅವರ ಕಾದಂಬರಿಗಳೆಲ್ಲವೂ ಜೀವನ ಮೌಲ್ಯ ಪ್ರತಿಪಾದಿಸುತ್ತಿದ್ದವು ಎಂದರು.

ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

'ಕಾರ್ತವೀರ್ಯಾರ್ಜುನ ಕಾಳಗ' ಪ್ರಸಂಗ ಪ್ರದರ್ಶನ

ಸಭಾ ಕಾರ್ಯಕ್ರಮದ ಬಳಿಕ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ವತಿಯಿಂದ 'ಕಾರ್ತವೀರ್ಯಾರ್ಜುನ ಕಾಳಗ' ಪ್ರಸಂಗ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಳೆ- ನರಸಿಂಹ ಹೆಗಡೆ ಮೂರೂರು, ಚಂಡೆ- ವಿನಾಯಕ ಭಟ್ರಮನೆ ಕತಗಾಲ, ಮುಮ್ಮೇಳದಲ್ಲಿ ಕೆರೆಮನೆ ಶಿವಾನಂದ ಹೆಗಡೆ, ತಿಮ್ಮಪ್ಪ ಹೆಗಡೆ ಶಿರಳಗಿ, ಈಶ್ವರ ಭಟ್ಟ ಅಂಸಳ್ಳಿ, ಶ್ರೀಧರ್​ ಹೆಗಡೆ ಕೆರೆಮನೆ, ವಿಘ್ನೇಶ್ವರ ಹಾನಗೋಡಿ, ಚಂದ್ರಶೇಖರ್​ ಎನ್​., ಗಣಪತಿ ಕುಣಬಿ ಬಾರೆ, ಕೃಷ್ಣ ಮರಾಠಿ ಮುಂಡಾರ, ಅಕ್ಷಯ್​ ಶೇರುಗಾರ, ಸದಾಶಿವ್​ ಭಟ್ಟ ಮಲವಳ್ಳಿ, ದೀಪಕ್​ ಭಟ್ಟ ಕುಂಕಿ ಯಲ್ಲಾಪುರ, ಚೌಕಿ ಸಹಾಯಕರಾಗಿ ನಾಗರಾಜ್​ ನಾಯ್ಕ ಉಪಸ್ಥಿತರಿದ್ದರು.

ಡಾ. ನಾರಾಯಣ ಸಭಾಹಿತ ಮಾತನಾಡಿದರು.
ಉನ್ನತ ಶಿಕ್ಷಣದ ಆದ್ಯತೆಯೊಂದಿಗೆ ಕರಾವಳಿಯ ಕಲೆ ಉಳಿಸಿ ಬೆಳೆಸಲು ಮಾಹೆ ವತಿಯಿಂದ ಯಕ್ಷಗಾನ ಕೋರ್ಸ್​ ಆರಂಭಿಸಿದ್ದು ಹೊರ ರಾಜ್ಯದ ವಿದ್ಯಾರ್ಥಿಗಳೂ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕವೂ ಯಕ್ಷಗಾನ ಕಲಿಸಲು ಚಿಂತನೆ ಮಾಡಲಾಗಿದೆ.
ಡಾ. ನಾರಾಯಣ ಸಭಾಹಿತ. ಮಾಹೆ ಸಲಹೆಗಾರ, ಮಣಿಪಾಲ ಅಕಾಡೆಮಿ ಆಫ್​ ಜನರಲ್​ ಎಜುಕೇಷನ್​ನ ಕಾರ್ಯದರ್ಶಿ.