ಉಡುಪಿ: ಸಮಾಜ ಸುಧಾರಣೆ, ಸಮ ಸಮಾಜ ನಿಮಾರ್ಣ ಹಾಗೂ ದೇಶಕ್ಕೆ ಸ್ವಾತಂತ್ರ$್ಯ ದೊರಕಿಸುವಲ್ಲಿ ಅನೇಕ ಮಹನೀಯರು, ದಾರ್ಶನಿಕರು, ವೀರ ಮಹಿಳೆ&ಪುರುಷರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅಂಥಹವರನ್ನು ಸ್ಮರಿಸಿಕೊಳ್ಳುವ ಕಾರ್ಯ ಅತ್ಯಗತ್ಯ. ಭಾರತೀಯ ಆಧ್ಯಾತ್ಮಿಕ ಚಿಂತಕ ಮತ್ತು ನೈತಿಕ ಮೌಲ್ಯಗಳ ಪ್ರತಿಪಾದಕ ಶ್ರೀಮಧ್ವಾಚಾರ್ಯರ ಜಯಂತಿಯನ್ನು ಈ ವರ್ಷದಿಂದ ಸರ್ಕಾರವೇ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಉಡುಪಿಯ ಜಿಪಂ ಕಚೇರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ (ಅ.23) ಆಯೋಜಿಸಿದ್ದ ಜಗದ್ಗುರು ಶ್ರೀ ಮಧ್ವಾಚಾರ್ಯ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಪ್ರಥಮ ಮಹಿಳಾ ಹೋರಾಟಗಾರ್ತಿಯಾದ ಚನ್ನಮ್ಮಳ ವೀರ, ಶೌರ್ಯ ಗುಣಗಳನ್ನು ಮಹಿಳೆಯರೂ ಅಳವಡಿಸಿಕೊಳ್ಳಬೇಕು ಎಂದರು.
ಅನುಕರಣೀಯ ತತ್ತ್ವ
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ದ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವಾಚಾರ್ಯರ ತತ್ತ್ವಗಳು ಅನುಕರಣೀಯವಾಗಿವೆ. ಜಲಸಂಪನ್ಮೂಲದ ಅಭಿವೃದ್ಧಿಯಿಂದ ಬದುಕು ಕಟ್ಟಿಕೊಡುವ ಕೆಲಸವನ್ನು ಆಗಿನ ಕಾಲದಲ್ಲಿಯೇ ಮಾಡಿದ್ದರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಡಿದ ಚನ್ನಮ್ಮಳ ಧೈರ್ಯ ಇಂದಿನ ಮಹಿಳೆಯರಿಗೆ ಮಾದರಿಯಾಗಬೇಕು ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿದರು. ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬಿ.ಗೋಪಾಲ ಆಚಾರ್ಯ ಅವರು ಶ್ರೀ ಮಧ್ವಾಚಾರ್ಯರ ಕುರಿತು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಅವರು ಕಿತ್ತೂರು ರಾಣಿ ಚನ್ನಮ್ಮಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ರಿ.)ದ ಅಧ್ಯಕ್ಷ ಜಯರಾಮ ಆಚಾರ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಿರಂಜನ ಚೋಳಯ್ಯ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿಯ ಪಾಜಕ ಪುಣ್ಯಭೂಮಿಯಲ್ಲಿ ಅವತರಿಸಿದ ಮಧ್ವಾಚಾರ್ಯರು ನಡೆದಾಡಿದ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಜೀವನ ನಡೆಸುತ್ತಿರುವುದು ಉಡುಪಿಯ ಜನತೆಯ ಪಾಲಿಗೆ ಸದಾ ಹೆಮ್ಮೆಯ ವಿಷಯ. ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಅಷ್ಟಮಠಗಳ ಮೂಲಕ ಯತಿಗಳೇ ಪೂಜಿಸುವ ಪರಂಪರೆಯಿಂದ ಉಡುಪಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ತುಳುವಿಗೆ ವಿಶೇಷ ಮಾನ್ಯತೆ ನೀಡಿದ್ದ ಜಗದ್ಗುರುವಿನ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅಷ್ಟಮಠಗಳ ಯತಿಗಳ ಸಲಹೆ, ಮಾರ್ಗದರ್ಶನದಲ್ಲಿ ರಾಜ್ಯಕ್ಕೆ ಮಾದರಿಯಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು.ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.