ಶಿಕ್ಷಕ ಸುರೇಶ್ ಜತೆ ಆದಿತ್ಯ  
ಉಡುಪಿ

ಗ್ರಾಮೀಣ ಸರ್ಕಾರಿ ಪ್ರೌಢಶಾಲೆ ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ!

ಕಾರ್ಕಳ (ಉಡುಪಿ): ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು, ಕುಕ್ಕುಜೆಯ ಪ್ರೌಢಶಾಲಾ ವಿಭಾಗ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದೆ!

ಶಾಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಆದಿತ್ಯ ರೂಪಿಸಿದ ಕಟ್ ಇಟ್ ಈಜಿ ಎಂಬ ನೂತನ ಯಂತ್ರ ಇನ್ಸ್‌ಪೈರ್ ಅವಾರ್ಡ್ಸ್ ಮಾನಕ್ ಸ್ಪರ್ಧೆಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ದಾಟಿ ರಾಷ್ಟ್ರಮಟ್ಟಕ್ಕೆ ತಲುಪಿ, ಇದೀಗ ದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ಟಾಪ್-60 ಆವಿಷ್ಕಾರಗಳಲ್ಲಿ ಸ್ಥಾನ ಪಡೆದು, ಜಪಾನ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ. ಲಭ್ಯ ಮಾಹಿತಿ ಪ್ರಕಾರ, ಒಂದೇ ಶಾಲೆಯಿಂದ ಎರಡು ಬಾರಿ ಈ ಸಾಧನೆ ಮಾಡಿದ ದೇಶದ ಮೊದಲ ಶಾಲೆ ಎಂಬ ವಿಶೇಷತೆಯನ್ನೂ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆ ತನ್ನದಾಗಿಸಿದೆ!

ಈ ಹಿಂದೆ ಇದೇ ಶಾಲೆಯ ವಿದ್ಯಾರ್ಥಿನಿಯರಾದ ಅಮೂಲ್ಯ ಹೆಗ್ಡೆ ಮತ್ತು ನಿಖಿತಾ ಇನ್ಸ್ಪೈರ್ ಅವಾರ್ಡ್ಸ್ ಮಾನಾಕ್ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಜಪಾನ್‌ನ ಸಕೂರ ಸೈನ್ಸ್ ಹೈಸ್ಕೂಲ್ ಪ್ರೊಗ್ರಾಂಗೆ ಆಯ್ಕೆಯಾಗಿದ್ದರು. ಮೂವರು ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡಿದವರು ಶಿಕ್ಷಕ ಸುರೇಶ್ ಮರಕಾಲ. ಈ ಬಾರಿ ರಾಜ್ಯದಿಂದ ರಾಷ್ಟ್ರಮಟ್ಟಕ್ಕೆ ತಲುಪಿದ ಒಟ್ಟು 120 ವಿದ್ಯಾರ್ಥಿಗಳ ಪೈಕಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದವರು 9 ವಿದ್ಯಾರ್ಥಿಗಳು ಮಾತ್ರ. ಈವರೆಗೆ ಮೂವರು ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸುರೇಶ್ ಮರಕಾಲ ಅವರ ಮಾರ್ಗದರ್ಶನ ಹಾಗೂ ಆದಿತ್ಯನ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.