ಪಾಪನಾಶಿನಿ ಹೊಳೆಯ ನೀರಿನಲ್ಲಿ ಪತ್ತೆಯಾದ ಜಾನುವಾರಿನ ಅವಶೇಷಗಳನ್ನು ಪಶು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರ ತಂಡ ಪರಿಶೀಲನೆ ನಡೆಸುತ್ತಿರುವುದು. 
ಉಡುಪಿ

ಕಲೋಟ್ಟು ಸೇತುವೆ ಕೆಳಗಡೆ ಹಸುವಿನ ಅವಶೇಷ ಪತ್ತೆ

ಶಿರ್ವ: ಕಲೋಟ್ಟು ಸೇತುವೆ ಕೆಳಗಡೆ ಹರಿಯುವ ಪಾಪನಾಶಿನಿ ಹೊಳೆಯಲ್ಲಿ ಹಸುವೊಂದನ್ನು ಕಡಿದು, ಅದರ ಅವಶೇಷಗಳನ್ನು ಎಸೆದು ವಿಕೃತಿ ಮೆರೆದಿರುವುದು ಸೋಮವಾರ ಬೆಳಕಿಗೆ ಬಂದಿದೆ.
ಕಲೋಟ್ಟು ಸೇತುವೆಯ ಕೆಳಗಿನ ಪಾಪನಾಶಿನಿ ಹೊಳೆಯ ನೀರಿನಲ್ಲಿ ಜಾನುವಾರಿನ ತಲೆಬುರುಡೆ ಹಾಗೂ ಕಾಲುಗಳು ಬಿದ್ದಿರುವ ಬಗ್ಗೆ ಶಿರ್ವ ಪೊಲೀಸರಿಗೆ ವಾಹಿತಿ ಲಭಿಸಿತ್ತು. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕೃತ್ಯ ದೃಢಪಟ್ಟಿದೆ.
ನೀರಿನಲ್ಲಿದ್ದ ಅವಶೇಷಗಳನ್ನು ಪರಿಶೀಲಿಸಿದಾಗ, ಸೇತುವೆಯ ದಕ್ಷಿಣ ಭಾಗದ ನೀರಿನಲ್ಲಿ ಚರ್ಮವಿಲ್ಲದ, ಹಲ್ಲುಗಳು ಮತ್ತು ಮೂಗಿನ ಹೊಳ್ಳೆಗಳನ್ನು ಒಳಗೊಂಡ ಜಾನುವಾರಿನ ಮೇಲ್ದವಡೆಯ ಪೂರ್ತಿ ಭಾಗ ಪತ್ತೆಯಾಗಿದೆ. ಇದು ಹಸುವಿನ ತಲೆಯ ಭಾಗವಾಗಿರಬಹುದು ಎಂದು ಪಶು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸ್ವಲ್ಪ ದೂರದಲ್ಲಿ ಜಾನುವಾರಿನ ಕಾಲಿನ ಎರಡು ಗೆರಸುಗಳು, ವಾಂಸದ ತುಂಡುಗಳು ಹಾಗೂ ಹೊಟ್ಟೆಯ ಒಳಗಿನ ಭಾಗಗಳು ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಇವು ಕೂಡ ಹಸುವಿನ ಅವಶೇಷಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಶಿರ್ವ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.