ಉಡುಪಿ: ಕಲಿಕೆ ನಿರಂತರ ಪ್ರಕ್ರಿಯೆ. ಜೀವನದಲ್ಲಿ ಎಷ್ಟು ಓದಿದರೂ ಕಡಿಮೆಯೇ. ಓದಿದಷ್ಟೂ ಮತ್ತೂ ಓದಬೇಕು ಎನಿಸುತ್ತದೆ. ಗ್ರಂಥಾಲಯಗಳು ಜ್ಞಾನಗಳ ಭಂಡಾರ. ಪ್ರಪಂಚದ ಎಲ್ಲ ಭಾಷೆಯ ಪುಸ್ತಕಗಳು ಇಲ್ಲಿ ಲಭಿಸುತ್ತದೆ. ಪುಸ್ತಕ ಓದುವುದರಿಂದ ಜ್ಞಾನ ಇನ್ನಷ್ಟು ವಿಕಸನ ಆಗುತ್ತದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ವತಿಯಿಂದ ಅಜ್ಜರಕಾಡುನಲ್ಲಿರುವ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಉತ್ತಮ ಓದುಗ, ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
30 ಕೋಟಿ ಯುವಸಮುದಾಯ ಇರುವ ಭಾರತದಲ್ಲಿ ಹಲವಾರು ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿ ದೊರೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಓದಿಯೇ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಅಧಿಕಾರಿಗಳಾಗುತ್ತಿದ್ದಾರೆ. ಗ್ರಂಥಾಲಯ ಪಿತಾಮಹ ಎಸ್. ಆರ್. ರಂಗನಾಥ ಅವರ ದೂರದೃಷ್ಟಿಯ ಪರಿಣಾಮವಾಗಿ ಇಂದು ದೇಶದ ಮೂಲೆ ಮೂಲೆಯಲ್ಲೂ ಸಾರ್ವಜನಿಕ ಗ್ರಂಥಾಲಯಗಳಿವೆ ಎಂದರು.
ಸಾಧಕರಿಗೆ ಸನ್ಮಾನ
ಉತ್ತಮ ಓದುಗ ಪುರಸ್ಕಾರಕ್ಕೆ ಭಾಜನರಾದ ಗಣೇಶ ಬಿ. ಹೆಗ್ಡೆ, ವಿಜಯಲಕ್ಷ್ಮೀ ಬಿ.ವಿ., ಉತ್ತಮ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ಭಾಜನರಾದ ಪುಷ್ಪಾ, ನಳಿನಾಕ್ಷಿ, ಸಾಧನಾ ಹಾಗೂ ಅನಿತಾ ಅವರನ್ನು ಸನ್ಮಾನಿಸಲಾಯಿತು. ಸೈಬರ್ ಸುರಕ್ಷತಾ ಜಾಗೃತಿ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯ ನಿಲೇಶ ವಿಶೇಷ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಅಶೋಕ ಕಾಮತ ಉಪಸ್ಥಿತರಿದ್ದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯಾಧಿಕಾರಿ ನಮಿತಾ ಬಿ. ಸ್ವಾಗತಿಸಿದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯಾಧಿಕಾರಿ ರಂಜಿತಾ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯ ಸಹಾಯಕಿ ಶ್ಯಾಮಲಾ ವಂದಿಸಿದರು.