ಉಪ್ಪಿನಂಗಡಿ ಪೇಟೆಯ ಅಲ್ಲಲ್ಲಿ ಕಾಣಿಸುವ ಕಸದ ರಾಶಿ.
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಸಂದರ್ಭ ಒಣ ತ್ಯಾಜ್ಯಗಳನ್ನಷ್ಟೇ ಸಂಗ್ರಹಿಸಿ ಸಂಗ್ರಹಿಸಲಾಗುತ್ತಿದ್ದು, ಹಸಿ ತ್ಯಾಜ್ಯ ಸಂಗ್ರಹಣೆ ಸ್ಥಗಿತಗೊಳಿಸಿದ್ದರಿಂದ ಹಲವೆಡೆ ದುರ್ನಾತ ಬೀರಲಾರಂಭಿಸಿದ್ದರಿಂದ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.
ಪಂಚಾಯಿತಿ ವತಿಯಿಂದ ನಿರ್ವಹಿಸಲ್ಪಡುವ ತ್ಯಾಜ್ಯ ವಿಲೇವಾರಿಗೆ ಜನರು ಮಾಸಿಕ ಶುಲ್ಕ ಪಾವತಿಸುತ್ತಿದ್ದರೂ ತ್ಯಾಜ್ಯ ಸಂಗ್ರಹಣೆ ಮಾತ್ರ ಸೂಕ್ತವಾಗಿ ನಡೆಯುತ್ತಿಲ್ಲ. ಪಂಚಾಯಿತಿ ಕಡೆಯಿಂದ ಸೂಚಿಸಿದಂತೆ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ಎಂದು ವಿಂಗಡಿಸಲಾಗಿದ್ದು, ಪ್ರತ್ಯೇಕವಾಗಿಯೇ ತುಂಬಿಸಿ ಇಡಲಾಗುತ್ತಿದೆ. ಆದರೆ ವಿಲೇವಾರಿ ಕಾರ್ಮಿಕರು ಕಳೆದ ಒಂದು ವಾರದಿಂದ ಒಣಕಸ ಮಾತ್ರ ಕೊಂಡೊಯ್ಯುತ್ತಿದ್ದು, ಹಸಿ ಕಸ ಸಂಗ್ರಹ ಮಾಡಲು ಮತ್ತೊಂದು ವಾಹನ ಬರಲಿದೆ ಎಂದಿದ್ದಾರೆ. ಇದುವರೆಗೆ ಹಸಿ ಕಸ ಸಂಗ್ರಹಕ್ಕೆ ಮುಂದಾಗದಿರುವುದರಿಂದ ಸ್ಥಳೀಯ ಪರಿಸರದಲ್ಲಿ ದುರ್ನಾತ ಬರಲಾರಂಭಿಸಿದೆ. ಜತೆಗೆ ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಆರಂಭವಾಗಿದೆ.
ಜನಪ್ರತಿಧಿಗಳಿಲ್ಲದೇ ಸಮಸ್ಯೆ
ಪಂಚಾಯಿತಿ ಚುನಾಯಿತ ಆಡಳಿತ ಅವಧಿ ಮುಗಿದಿರುವುದರಿಂದ ಪಂಚಾಯಿತಿ ಆಡಳಿತಾಧಿಕಾರಿಯ ಅಧೀನದಲ್ಲಿದ್ದು, ಸ್ಥಳೀಯ ಜನಪ್ರತಿನಿಧಿಗಳಿಲ್ಲದೇ ಇರುವುದರಿಂದ ಸಮಸ್ಯೆಗಳನ್ನು ಮನವರಿಕೆ ಮಾಡುವುದೇ ದುಸ್ತರವಾಗಿದೆ. ಇತ್ತ ಅಧಿಕಾರಿಗಳೂ ಪಂಚಾಯಿತಿಯಲ್ಲಿ ಲಭ್ಯವಿಲ್ಲದಿರುವುದರ ಜತೆಗೆ ಸಿಬ್ಬಂದಿ ಸೂಕ್ತವಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ದೂರಲಾರಂಭಿಸಿದ್ದಾರೆ.
ಹಸಿ ಕಸವು ವಾರದಿಂದ ಮನೆಯಂಗಳದಲ್ಲೇ ಸಂಗ್ರಹಗೊಳ್ಳುಗತ್ತಿರುವುದರಿಂದ ಗಬ್ಬು ವಾಸನೆ ಬರಲಾರಂಭಿಸಿದೆ. ಇನ್ನಾದರೂ ಕಸ ಸಂಗ್ರಹಿಸಲು ಕಾರ್ಮಿಕರು ಬಾರದೇ ಇದ್ದಲ್ಲಿ ನಾನೇ ಹಸಿಕಸಗಳನ್ನು ತೆಗೆದುಕೊಂಡು ಹೋಗಿ ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಸುರಿಯುತ್ತೇನೆ. ಶುಲ್ಕ ಕಟ್ಟಿಸಿಕೊಳ್ಳುವ ಆಡಳಿತ ವರ್ಗ ಬಳಿಕ ಕರ್ತವ್ಯ ನಿರ್ವಹಿಸದೇ ನುಣುಚಿಕೊಳ್ಳುತ್ತದೇ ಎಂದು ಸ್ಥಳೀಯ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಜೀವಿನಿ ಮಹಿಳಾ ತಂಡಕ್ಕೆ ತ್ಯಾಜ್ಯ ವಿಲೇವಾರಿ ಹೊಣೆ ಒಪ್ಪಿಸಲು ಸರ್ಕಾರದ ಆದೇಶವಿದ್ದು, ಟೆಂಡರ್ ಪ್ರಕ್ರಿಯೆ ಕೈಬಿಟ್ಟು ನೇರವಾಗಿ ಸಂಜೀವಿನಿ ತಂಡಕ್ಕೆ ಹೊಣೆ ನೀಡಲಾಗಿದೆ. ಆದರೆ ಈ ಕಾರ್ಯ ನಡೆಸಲು ತಂಡ ಹಿಂದೇಟು ಹಾಕಿದ್ದು, ಪರ್ಯಾಯ ವ್ಯವಸ್ಥೆಗೆ ಸಮಯ ಅಗತ್ಯವಿದೆ. ಟೆಂಡರ್ ಕರೆಯುವ ಮತ್ತು ಹೊಸ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ.
— ವಿಲ್ಫ್ರೆ ಡ್ ಲಾರೆನ್ಸ್ ರೋಡ್ರೀಗಸ್, ಉಪ್ಪಿನಂಗಡಿ ಪಿಡಿಒ
ಪ್ರತಿ ತಿಂಗಳು ನಿಯಮಿತವಾಗಿ ತ್ಯಾಜ್ಯ ವಿಲೇವಾರಿಯ ಹೆಸರಿನಲ್ಲಿ ಸಂಜೀವಿನಿ ತಂಡದ ಸದಸ್ಯರು 400 ರೂ. ಸಂಗ್ರಹಿಸುತ್ತಿದ್ದು, ಆದರೆ ಹಸಿ ತ್ಯಾಜ್ಯ ಬಾಕಿ ಉಳಿಸಿದ್ದರಿಂದ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸಿವೆ. ಶುಲ್ಕ ಸಂಗ್ರಹಿಸುವ ತಂಡ ತ್ಯಾಜ್ಯವನ್ನೂ ಕೊಂಡೊಯ್ಯಲೇಬೇಕು. ವ್ಯವಸ್ಥೆ ಸರಿಪಡಿಸಲು ವಿಳಂಬ ಮಾಡಿದಷ್ಟು ಅಧಿಕಾರಿ ವರ್ಗದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಲಿದೆ.
— ಫಯಾಜ್, ಉದ್ಯಮಿ