ಮನೆಗೆ ಮೇಲ್ಛಾವಣಿ ನಿರ್ಮಿಸಿಕೊಟ್ಟ ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಅವರನ್ನು ಲೀಲಾವತಿ ಕುಟುಂಬದವರು ಗೌರವಿಸಿದರು. ಪ್ರಮುಖರಾದ ರಾಜೇಶ್ ರೈ ಪರ್ಪುಂಜ, ಚಂದ್ರಶೇಖರ ರೈ, ಪ್ರಶಾಂತ್ ಕುಮಾರ್ ಇತರರು ಇದ್ದರು.  
ಉಡುಪಿ

ಗಾಳಿ-ಮಳೆಗೆ ಕುಸಿದಿದ್ದ ಮನೆ ಮೇಲ್ಛಾವಣಿ ನಿರ್ಮಾಣ

ಪುತ್ತೂರು ಗ್ರಾಮಾಂತರ: ಮೇ ತಿಂಗಳಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಸಂಕಷ್ಟಕ್ಕೊಳಗಾಗಿದ್ದ ಕೆಯ್ಯೂರು ಗ್ರಾಮದ ಬಡ ಕುಟುಂಬಕ್ಕೆ ಪುತ್ತೂರಿನ ವಿಜಯ ಸಾಮ್ರಾಟ್ ಸಂಘಟನೆ ಆಸರೆಯಾಗಿದೆ.
ಕಬ್ಬಿಣದ ರಾಡ್ ಹಾಗೂ ಶೀಟ್ ಅಳವಡಿಸಿದ ಸುಸಜ್ಜಿತ ಮೇಲ್ಛಾವಣಿ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ತೋರಿದೆ.
ಮೇ 11ರಂದು ಸುರಿದ ಭಾರಿ ಮಳೆ-ಗಾಳಿಯಿಂದಾಗಿ ಕೆಯ್ಯೂರು ಗ್ರಾಮದ ಸಣಂಗಳ ನಿವಾಸಿ ಲೀಲಾವತಿ ಯಶೋಧರ ಗೌಡ ಅವರ ಕೆಂಪು ಕಲ್ಲಿನ ಗೋಡೆಯ ಮನೆಯ ಹೆಂಚಿನ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದು ಹಾನಿಗೊಂಡಿತ್ತು. ಈ ಘಟನೆಯಿಂದಾಗಿ ಇಬ್ಬರು ಪುತ್ರಿಯರು ಹಾಗೂ ಪುತ್ರರಿರುವ ಲೀಲಾವತಿ ಕುಟುಂಬ ತೀರಾ ಸಂಕಷ್ಟಕ್ಕೊಳಗಾಗಿತ್ತು.
ವಿಷಯ ತಿಳಿದ ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಮತ್ತು ಪದಾಧಿಕಾರಿಗಳು ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ತಕ್ಷಣವೇ ಮನೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡರು.
ವಿಜಯ ಸಾಮ್ರಾಟ್ ವತಿಯಿಂದ 50 ಸಾವಿರ ರೂ. ವೆಚ್ಚದಲ್ಲಿ ಕಬ್ಬಿಣದ ರಾಡ್, ಕಬ್ಬಿಣದ ಸಲಾಕೆ ಹಾಗೂ ಸಿಮೆಂಟ್ ಶೀಟ್ ಅಳವಡಿಸಿದ ಮನೆಯ ಮೇಲ್ಛಾವಣಿ ನಿರ್ಮಿಸಿಕೊಟ್ಟಿದ್ದಾರೆ. ಕೆಯ್ಯೂರಿನ ಶ್ರೀದುರ್ಗಾ ಇಂಡಸ್ಟ್ರೀಸ್ ಸಂಸ್ಥೆ ಮೇಲ್ಛಾವಣಿ ನಿರ್ಮಿಸಿದೆ.

ಸಂಕಷ್ಟದ ಸಮಯದಲ್ಲಿ ನೆರವಾದ ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಅವರನ್ನು ಲೀಲಾವತಿ ಕುಟುಂಬದವರು ಗೌರವಿಸಿ ಕೃತಜ್ಞತೆ ಸಲ್ಲಿಸಿದರು. ಸಂಘಟನೆಯ ಪ್ರಮುಖರಾದ ರಾಜೇಶ್ ರೈ ಪರ್ಪುಂಜ, ಚಂದ್ರಶೇಖರ ರೈ, ಪ್ರಶಾಂತ್ ಕುಮಾರ್ ಬಾಕ್ತಿಮಾರ್, ದಿನೇಶ್ ವಾಸುಕಿ, ವಿನಯ ಕುಮಾರ್ ಕೊಡ್ಲೆ, ವಿಜಯ ಕುಮಾ, ದಿಲೀಪ್ ಸಣಂಗಳ, ಸುಜನ್ ಕುಮಾರ್, ಜಯಂತಿ ಎರೆಕ್ಕಳ, ಶಿಲ್ಪಾ, ವೇದಾವತಿ ಮತ್ತಿತರರು ಇದ್ದರು.

ಮುಂದಿನ ದಿನಗಳಲ್ಲಿ ಲೀಲಾವತಿ ಕುಟುಂಬಕ್ಕೆ ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಒಂದು ವೇಳೆ ಸರ್ಕಾರದಿಂದ ಅನುದಾನ ಸಿಗದಿದ್ದರೆ ವಿಜಯ ಸಾಮ್ರಾಟ್ ವತಿಯಿಂದಲೇ ನೂತನ ಮನೆ ನಿರ್ಮಿಸಿಕೊಡುವ ಬಗ್ಗೆ ಚಿಂತನೆ ಮಾಡಲಾಗುವುದು.

— ಸಹಜ್ ರೈ ಬಳಜ್ಜ, ವಿಜಯ ಸಾಮ್ರಾಟ್ ಸ್ಥಾಪಕಾಧ್ಯಕ್ಷ