ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸಭೆಯಲ್ಲಿ ಮಾತನಾಡಿದರು.
ಉಡುಪಿ: ಸಾಸ್ತಾನ ಹಾಗೂ - ಶಿರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರದಲ್ಲಿ ನೀಡಿರುವ ರಿಯಾಯಿತಿಯಂತೆ ಹೆಜಮಾಡಿ ಭಾಗದ ಟೋಲ್ ವ್ಯಾಪ್ತಿಯ ಸ್ಥಳಿಯರಿಗೆ ವಿನಾಯಿತಿ ನೀಡುವಂತೆ ಕೋರಿ ಲೋಕೋಪಯೋಗಿ ಇಲಾಖೆಗೆ ಶಿಫಾರಸ್ಸು ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾ. ಹೆ. ಟೋಲ್ ಸುಂಕ ವಸೂಲಾತಿ ಸಮಸ್ಯೆ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಜಮಾಡಿ ವ್ಯಾಪ್ತಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಸಾಸ್ತಾನದಲ್ಲಿ 10 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಳಿಯರಿಗೆ ವಿನಾಯಿತಿ ನೀಡಲಾಗಿದೆ. ಈ ಮಾದರಿಯನ್ನೇ ಹೆಜಮಾಡಿಯಲ್ಲಿ ಅನುಸರಿಸುವಂತೆ ಸ್ಥಳಿಯರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ದಿನದಲ್ಲಿ ಹಲವು ಬಾರಿ ಟೋಲ್ನಲ್ಲಿ ಹಾದುಹೋಗುವಾಗ ಪ್ರತಿಬಾರಿಯೂ ಶುಲ್ಕ ಪಾವತಿ ಮಾಡಲು ಅನಾನುಕೂಲತೆ ಉಂಟಾಗುತ್ತದೆ. ಟೋಲ್ ಪ್ಲಾಜಾ ಸುತ್ತಮುತ್ತಲಿನ ಸ್ಥಳಿಯ ವಾಹನಗಳಿಗೆ ಹಾಗೂ ನಿಗದಿತ ವ್ಯಾಪ್ತಿಯಲ್ಲಿ ಬರುವ ನೋಂದಾಯಿತ ವಾಹನಗಳಿಗೆ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್ ಸೌಲಭ್ಯ ಕಲ್ಪಿಸಿದಲ್ಲಿ ಅನುಕೂಲವಾಗಲಿದೆ ಎಂಬ ಬೇಡಿಕೆ ಇದೆ ಎಂದು ಹೇಳಿದರು.
ಈಗಾಗಲೇ ರಾ.ಹೆ. 66ರ ಕೆಲವು ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆಗಳನ್ನು ನಿಮಾರ್ಣ ಮಾಡಲು ಅನುಮತಿ ದೊರಕಿದ್ದು, ಇವುಗಳ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ, ಪೂರ್ಣಗೊಳಿಸಬೇಕು. ಸರ್ವೀಸ್ ರಸ್ತೆ, ರಸ್ತೆ ರಿಪ್ಲೆಕ್ಟರ್ಗಳ ಅಳವಡಿಕೆ, ದಾರಿದೀಪ ಅಳವಡಿಕೆ, ರಸ್ತೆಯಲ್ಲಿ ಹೊಂಡ-ಗುಂಡಿ ದುರಸ್ಥಿ, ಒಳಚರಂಡಿ ಕಾಮಗಾರಿ, ಜಂಕ್ಷನ್ಗಳಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಸುರಕ್ಷತಾ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಅಪಘಾತಗಳಿಗೆ ಕಡಿವಾಣ ಹಾಕಬಹುದು. ಇದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್. ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಮತ್ತಿತರರು ಉಪಸ್ಥಿತರಿದ್ದರು.