ವಿಜಯವಾಣಿ ಸುದ್ದಿಜಾಲ ಕೋಟ
ಸಾಹಿತ್ಯ ಸಮ್ಮೇಳನ ಮೂಲಕ ಐಕ್ಯತೆ ಸಾರುವ ಕಾರ್ಯವಾಗಬೇಕು. ಚುಟುಕು ಸಾಹಿತ್ಯದ ಮೂಲಕ ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಪುಸ್ತಕ ಓದುವ ಹಾಗೂ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯ ನಡೆಯಬೇಕು. ಈಗಾಗಲೇ ಬ್ರಹ್ಮಾವರ ತಾಲೂಕಿನಲ್ಲಿ 70 ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕುಂದಗನ್ನಡ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಎಂದು ಸಾಹಿತಿ ನರೇಂದ್ರ ಕುಮಾರ್ ಕೋಟ ಹೇಳಿದರು.
ಸಾಸ್ತಾನದದಲ್ಲಿ ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ನೇತೃತ್ವದಲ್ಲಿ ಭಾನುವಾರ ‘ಬತ್ತದ ಹೆಜ್ಜೆ ನಾವೀನ್ಯದ ನಂದಾದೀಪ’ ಶೀರ್ಷಿಕೆಯಡಿ ಆಯೋಜಿಸಲಾದ ಬ್ರಹ್ಮಾವರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿ ಪಾ.ಚಂದ್ರಶೇಖರ್ ಚಡಗ ಕಾರ್ಯಕ್ರಮ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮ್ಮೇಳನದ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಚಾಲನೆ ನೀಡಿದರು. ಕಳೆದ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಿ.ನರಸಿಂಹ ಐತಾಳರ ಅನುಪಸ್ಥಿತಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಅವರು ಕನ್ನಡ ಧ್ವಜವನ್ನು ಪ್ರಸ್ತುತ ಸಮ್ಮೇಳನಾಧ್ಯಕ್ಷ ನರೇಂದ್ರ ಕುಮಾರ್ ಕೋಟ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾ ಕಸಾಪ ಗೌರವಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಯನ್ನಾಡಿದರು. ವಿದ್ವಾನ್ ಡಾ.ವಿಜಯ ಮಂಜರ್, ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಗಾಣಿಗ, ಗೌರವ ಕೋಶಾಧ್ಯಕ್ಷ ಮನೋಹರ ಪಿ., ಕೋಟ ವಿದ್ಯಾಸಂಘದ ರಾಮದೇವ ಐತಾಳ್, ಸಾಂಸ್ಕೃತಿಕ ಚಿಂತಕ ರಘು ಮಧ್ಯಸ್ಥ, ಪ್ರತಾಪ್ ಶೆಟ್ಟಿ ಸಾಸ್ತಾನ, ಶೈಕ್ಷಣಿಕ ಚಿಂತಕ ರಿಷಿರಾಜ್ ಸಾಸ್ತಾನ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಕೊಂಡಳಿ ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ಯು.ಎಸ್.ಶೆಣೈ ಉಪಸ್ಥಿತರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಸ್ವಾಗತಿಸಿದರು. ಕೋಶಾಧಿಕಾರಿ ಅಲ್ತಾರ್ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಶೆಟ್ಟಿ ಸಾಸ್ತಾನ ವಂದಿಸಿದರು. ಗಿರೀಶ್ ಅಡಿಗ ಕಾರ್ಯಕ್ರಮ ನಿರ್ವಹಿಸಿದರು. ಮಹಾಲಕ್ಷ್ಮೀ ಸೋಮಯಾಜಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಸುರೇಶ್ ಕಾರ್ಕಡ, ಮೀನಾ ಕಾರಂತ್ ನಾಡಗೀತೆ, ರೈತಗೀತೆ ಹಾಡಿದರು. ಸತೀಶ್ ವಡ್ಡರ್ಸೆ ಸಹಕರಿಸಿದರು.
ಸಾಸ್ತಾನದ ಗೋಳಿಗರಡಿ ದೈವಸ್ಥಾನದಿಂದ ಹೊರಟ ಮೆರವಣಿಗೆಗೆ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಗೋಳಿಗರಡಿ ದೈವಸ್ಥಾನದ ಪಾತ್ರಿ ಶಂಕರ್ ಪೂಜಾರಿ ಚಾಲನೆ ನೀಡಿದರು. ಸಾಹಿತ್ಯ ಸಮ್ಮೇಳನದ ಅಂಗವಾಗಿ ಪೂರ್ವಾಹ್ನ ಐರೋಡಿ ಗ್ರಾಮ ಆಡಳಿತಾಧಿಕಾರಿ ಡಾ.ಸೂರಜ್ ಶೆಟ್ಟಿ ರಾಷ್ಟ್ರ ಧ್ವಜಾರೋಹಣ, ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಪರಿಷತ್ ಧ್ವಜಾರೋಹಣ ನೆರವೆರಿಸಿದರು. ಸಾಸ್ತಾನ ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ, ಸಾಲಿಗ್ರಾಮ ದೇಗುಲದ ಟ್ರಸ್ಟಿ ಪ್ರಸನ್ನ ತುಂಗ, ತಾಲೂಕು ಸಾಹಿತ್ಯ ಪರಿಷತ್‌ನ ಮಡಿ ವಿಶ್ವನಾಥ ಖಾರ್ವಿ, ಶಿಕ್ಷಕ ಸತೀಶ್ ಶೆಟ್ಟಿ, ಉಮಾನಾಥ ಮತ್ತಿತರರಿದ್ದರು.