ವಿವಿಧ ಪುಷ್ಪಗಳಿಂದ ಸುಂದರವಾಗಿ ಅಲಂಕೃತ ಉಡುಪಿ ಇಂದ್ರಾಣಿಯ ಮುಖ್ಯಪ್ರಾಣ ದೇವರ ಶಿಲಾಮಯ ಗುಡಿ. 
ಉಡುಪಿ

ಇಂದ್ರಾಣಿಯಲ್ಲಿ ಮುಖ್ಯಪ್ರಾಣನ ಪುನರ್​ ಪ್ರತಿಷ್ಠೆ

* ಆಂಜನೇಯನಿಗೆ ವಿವಿಧ ಹೋಮ-ಹವನ 

* ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಇಂದ್ರಾಳಿಯಲ್ಲಿರುವ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರ ಅಷ್ಟಬಂಧ ಸಹಿತ ಪುನರ್​ ಪ್ರತಿಷ್ಠಾ ಕಾರ್ಯಕ್ರಮ ನೂತನ ಶಿಲಾಮಯ ಗುಡಿಯಲ್ಲಿ ಏ.4ರಂದು ಬೆಳಗ್ಗೆ 6.48ಕ್ಕೆ ಮೀನ ಲಗ್ನ ಮುಹೂರ್ತದಲ್ಲಿ ನಡೆಯಲಿದೆ.
ಬೆಳಗ್ಗೆ ಆದ್ಯ ಗಣಯಾಗ, ಪ್ರತಿಷ್ಠಾ ಹೋಮ, ಕಲಶಾಭಿಷೇಕ, ಪ್ರಾಯಶ್ಚಿತ ಹೋಮ, ಶ್ರೀವಾಯುಸ್ತುತಿ ಹೋಮ, ನವಗ್ರಹ ಹೋಮ, ಪವಮಾನ ಹೋಮ ನೆರವೇರಲಿದೆ. ಮಧ್ಯಾಹ್ನ 12:15ಕ್ಕೆ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಮಹಾಸುದರ್ಶನ ಹೋಮ, ದಿಶಾಹೋಮ, ಕಲಶ ಮಂಡಲ ರಚನೆ, ಅಧಿವಾಸ ಪೂಜೆ ಜರುಗಲಿದೆ.

ಧಾರ್ಮಿಕ ಸಭೆ

ಸಂಜೆ 5:30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರು, ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ವಿದ್ವಾಂಸ ದಾಮೋದರ್​ ಶಮಾರ್ ಬಾರ್ಕೂರು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಇಂದ್ರಾಣಿ ಮುಖ್ಯಪ್ರಾಣ, ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕರಾದ ಯಶಪಾಲ್​ ಸುವರ್ಣ, ವಿ. ಸುನೀಲಕುಮಾರ್​, ಕಾಪು ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಅಂಬಲಪಾಡಿ ಶ್ರೀಜನಾರ್ದನ&ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ನಿ.ಬೀ. ವಿಜಯ ಬಲ್ಲಾಳ್​, ಮಣಿಪಾಲದ ಡಾ. ಟಿಎಂಎ ಪೈ ಫೌಂಡೇಷನ್​ನ ಅಧ್ಯಕ್ಷ ಟಿ. ಅಶೋಕ್​ ಪೈ, ಮುಂಬಯಿಯ ಜಾಜ್​ ಇಂಟರ್​ನ್ಯಾಷನಲ್​ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಜಯಕರ್​ ಶೆಟ್ಟಿ ಬುಡ್ನಾರು, ಉಜ್ವಲ ಸಮೂಹ ಸಂಸ್ಥೆಗಳ ಪುರುಷೋತ್ತಮ ಪಿ. ಶೆಟ್ಟಿ, ಸಾಯಿರಾಧಾ ಸಮೂಹ ಸಂಸ್ಥೆಗಳ ಮನೋಹರ್​ ಎಸ್​. ಶೆಟ್ಟಿ, ಸ್ವದೇಶ್​ ಸಮೂಹ ಸಂಸ್ಥೆಗಳ ಶ್ರೀನಾಗೇಶ್​ ಹೆಗ್ಡೆ, ಉಡುಪಿ ತಹಸೀಲ್ದಾರ್​ ಗುರುರಾಜ್​ ಪಿ.ಆರ್​., ಉದ್ಯಮಿ ಇಂದ್ರಾಳಿ ಕುಶಲ್​ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.

ನೃತ್ಯ ವೈಭವ, ಭಜನಾಮೃತಂ

ಬೆಳಗ್ಗೆ 11ಕ್ಕೆ ಮಣಿಪಾಲದ ನೃತ್ಯ ಕಲಾ ಮಂದಿರದ ವಿದುಷಿ ಸವಿತಾ ಮುರಳೀಧರ್​ ಶಿಷ್ಯರಿಂದ ನೃತ್ಯ ವೈಭವ ನಡೆಯಲಿದೆ. ಸಂಜೆ 4ರಿಂದ ಮಣಿಪಾಲದ ಹುಡ್ಕೋ ಕಾಲನಿಯ ಶ್ರೀಪ್ರಸನ್ನ ಗಣಪತಿ ಭಜನಾ ಮಂಡಳಿಯ ವಿದುಷಿ ಉಷಾ ಹೆಬ್ಬಾರ್​ ಮತ್ತು ತಂಡದಿಂದ ಭಜನಾಮೃತಂ, ಮಧ್ಯಾಹ್ನ 2 ಗಂಟೆಗೆ ಗುಂಡಿಬೈಲು ಯಕ್ಷಗಾನ ಕಲಾ ಕ್ಷೇತ್ರದಿಂದ ತಾಳಮದ್ದಳೆ ನಡೆಯಲಿದೆ. ರಾತ್ರಿ 7:30ರಿಂದ ಉಡುಪಿಯ ಕಲಾಮಯಂ ವತಿಯಿಂದ ಜನಪದ ಕಲರವ ಜನಪದ ಹಾಗೂ ರಂಗ ಸಂಗೀತ, ಜಾನಪದ ವಾದ್ಯಪರಿಕರಗಳ ಸಮ್ಮಿಲನ ನಡೆಯಲಿದೆ.