ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಕಾರ್ಡ್ ಹೊಂದಿದವರ ಇಕೆವೈಸಿ ಜೋಡಣೆಗೆ ಎಲ್ಲ ಪಡಿತರ ಕೇಂದ್ರಗಳಲ್ಲಿ ಕೆಲವು ದಿನಗಳಿಂದ ಭಾನುವಾರವೂ ಸೇರಿದಂತೆ ಗ್ರಾಹಕರ ಅನುಕೂಲಕ್ಕಾಗಿ ಪಡಿತರ ಕೇಂದ್ರ ಸಿಬ್ಬಂದಿ ಕಾರ್ಯನಿರ್ವಹಿಸುತಿದ್ದಾರೆ.
ಸೆ.30ರೊಳಗೆ ಎಲ್ಲ ಕಾರ್ಡುದಾರ ಪಡಿತರ ಪಡೆಯುವ ಸದಸ್ಯರ ನ್ಯಾಯ ಬೆಲೆಯ ಅಂಗಡಿಗಳಲ್ಲಿ ಇಕೆವೈಸಿ ಜೋಡಣೆ ಮಾಡಲೇಬೇಕು ಎಂಬ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಬಹುತೇಕ ಜನರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿರುವುದು ಸಾಮಾನ್ಯವಾಗಿದೆ. ಬಹುತೇಕ ಕಡೆಯಲ್ಲಿ ಒಂದೇ ಸಮಯದಲ್ಲಿ ಇಕೆವೈಸಿ ನಡೆಯುವ ಕಾರಣ ಸರ್ವರ್ ಸಮಸ್ಯೆಯಿಂದ ಜನರು ರೋಸಿ ಹೋಗುತ್ತಿದ್ದು, ಕೆಲಸ ಬಿಟ್ಟು ಗಂಟೆಗಟ್ಟಲೆ ನಿಂತು ಮನೆಗೆ ಮರಳಿರುವುದು ಇದೆ.
ಸರ್ವರ್ ಸಮಸ್ಯೆಯಿಂದ ಕೆಲವು ಪಡಿತರ ಕೇಂದ್ರದಲ್ಲಿ ರಾತ್ರಿ 9 ಗಂಟೆ ತನಕವೂ ಇಕೆವೈಸಿ ಪ್ರಕ್ರಿಯೆ ನಡೆಸಿ, ಮತ್ತೆ ಬೆಳಗ್ಗೆ 7 ಗಂಟೆಗೆ ಆರಂಭ ಮಾಡಿದ ಉದಾಹರಣೆ ಬ್ರಹ್ಮಾವರ ತಾಲೂಕಿನ ಅನೇಕ ಕಡೆಯಲ್ಲಿದೆ. ಬ್ರಹ್ಮಾವರ ತಾಲೂಕಿನಲ್ಲಿ 1 ಲ್ಯಾಂಪ್ ಸೊಸೈಟಿ ಸೇರಿದಂತೆ 1 ಫಿಶರೀಸ್, 1 ಹಾಲು ಉತ್ಪಾದಕರ ಸಂಘ, 11 ಕೋಟ ವ್ಯವಸಾಯ ಸೇವಾ ಸಹಕಾರಿ, 9 ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ, 10 ಕೊಕ್ಕರ್ಣೆ ವ್ಯವಸಾಯ ಸೇವಾ ಸಹಕಾರಿ, 4 ಶಿರಿಯಾರ, 4 ಉಪ್ಪೂರು, 3 ಮಂದಾರ್ತಿ, 3 ಸಾಸ್ತಾನ, 1 ಬಾರ್ಕೂರು, ನ್ಯಾಯಬೆಲೆ ಪಡಿತರ ಸೇರಿದಂತೆ ಒಟ್ಟು 48 ಕೇಂದ್ರಗಳಲ್ಲಿ ಪಡಿತರ ವಿತರಣಾ ವ್ಯವಸ್ಥೆ ಇದೆ.
ಬ್ರಹ್ಮಾವರ ತಾಲೂಕಿನಲ್ಲಿ 5,732 ಅಂತ್ಯೋದಯ ಕಾರ್ಡ್ ಹೊಂದಿದವರಿದ್ದು, ಅದರಲ್ಲಿ 29,727 ಮಂದಿ ಕುಟುಂಬ ಸದಸ್ಯರಿದ್ದಾರೆ. 26,040 ಬಿಪಿಎಲ್ ಕಾರ್ಡುದಾರರಿದ್ದು, 1,05,614 ಸದಸ್ಯರು ಇದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ಜೀವನಕ್ಕೆ ಹೊರ ಜಿಲ್ಲೆ, ಹೊರ ರಾಜ್ಯದಲ್ಲಿ ದುಡಿಯುತ್ತಿರುವವರು, ದಿನ ಕೂಲಿ ವಾಡಿ ಜೀವನ ಮಾಡುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬ ಸದಸ್ಯರು ಪಡಿತರ ಇಕೆವೈಸಿಗಾಗಿ ರಜೆ ವಾಡಿ ಕೆಲಸ ಬಿಟ್ಟು ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇಂತಹ ವ್ಯವಸ್ಥೆಗೆ ಸರ್ವರ್ ವೇಗ ಹೆಚ್ಚಿಸುವ ಮತ್ತು ಇನ್ನೂ ಸ್ವಲ್ಪ ಕಾಲಾವಕಾಶ ನೀಡುವ ಕಾರ್ಯ ಸರ್ಕಾರದಿಂದ ಆಗಬೇಕಾಗಿದೆ.
ಉಡುಪಿ ಜಿಲ್ಲಾಧಿಕಾರಿ ಸೆ.30ರೊಳಗೆ ಎಲ್ಲ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ ಅತೀ ಬಿರುಸಿನಿಂದ ಇಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಬ್ರಹ್ಮಾವರ ತಾಲೂಕು ಆಹಾರ ಮತ್ತು ಗ್ರಾಹಕ ನಾಗರಿಕ ಸರಬರಾಜು ವ್ಯವಹಾರ ಇಲಾಖೆ ತಿಳಿಸಿದೆ.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂದ 9 ಶಾಖೆಗಳಲ್ಲಿ ಒಟ್ಟು 17,450 ಪಡಿತರ ಕಾರ್ಡ್ ಹೊಂದಿದ್ದು, ಇದರಲ್ಲಿ ಈಗಾಗಲೇ ಶೇ.60 ಇಕೆವೈಸಿ ಕಾರ್ಯ ಮುಗಿದಿದ್ದು, ನಿಗದಿತ ದಿನದೊಳಗೆ ಎಲ್ಲರ ನೋಂದಣಿ ಮುಗಿಸಲಿದ್ದೇವೆ.ಸುಭಾಶ್ಚಂದ್ರ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಇಒ