ರಂಗಕರ್ಮಿ ಪ್ರಸನ್ನ ಅವರಿಗೆ ರಂಗಭೂಮಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. 
ಉಡುಪಿ

ನಾಟಕ ಸತ್ಯದರ್ಶನ ಮಾಧ್ಯಮ: ಪ್ರಸನ್ನ

ಉಡುಪಿ: ನಾಟಕವು ಕೇವಲ ಮನರಂಜನೆಯಲ್ಲ, ಅದು ಸತ್ಯದರ್ಶನದ ಮಾಧ್ಯಮ. ಆರಂಭದಲ್ಲಿ ನಾಟಕವು ಅನುಕರಣೆ ಯಿಂದ ಪ್ರಾರಂಭವಾಗಬಹುದು. ನಟ ಪಾತ್ರದೊಂದಿಗೆ ತಾದಾತ್ಮ್ಯತೆ ಸಾಧಿಸಿದಾಗ ಮಾತ್ರ ಅದು ಸತ್ಯವಾಗುತ್ತದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದರು.
ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ರಂಗಭೂಮಿ ರಂಗೋತ್ಸವ ಉದ್ಘಾಟನಾ ಸಮಾರಂಭದಲ್ಲಿ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಮಾಜದಲ್ಲಿ 'ನಾಟಕ ಮಾಡುವುದು' ಎನ್ನುವುದನ್ನು ತಮಾಷೆಯಾಗಿ ಬಳಸಲಾಗುತ್ತದೆ, ಆದರೆ ನಿಜವಾದ ನಾಟಕವು ವಾಸ್ತವದಿಂದ ಹೊರಬಂದು ಸತ್ಯವನ್ನು ಅನ್ವೇಷಿಸುವ ಕಲೆ. ಈ ಕಲೆಯು ಮನುಷ್ಯನನ್ನು ತನ್ನ ಸ್ವಂತ ಅಸ್ತಿತ್ವದಿಂದ ಹೊರತಂದು, ಹೊಸ ಸೃಜನಶೀಲತೆಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಜೀವನ ಅನುಭವವನ್ನು ಪಡೆಯಲು 'ಕಾಯಕ' ಅಥವಾ ಕೆಲಸ ಅತ್ಯಂತ ಮುಖ್ಯ ಎಂದು ಎಲ್ಲಾ ಧರ್ಮಗಳು ಸಾರುತ್ತವೆ. ಬಸವಣ್ಣನವರ 'ಕಾಯಕವೇ ಕೈಲಾಸ' ತತ್ವವಿರಲಿ, ಎಲ್ಲವೂ ಕೆಲಸವನ್ನೇ ದೈವ ಎಂದು ಪರಿಗಣಿಸಿವೆ. ಪುರಂದರದಾಸರು, ಕನಕದಾಸರು, ಕಬೀರ ಮತ್ತು ರವಿದಾಸರಂತಹ ಸಂತರು ಕಲಿಸಿದ್ದಾರೆ. ನಿಮ್ಮ ಕೆಲಸವೇ ದೈವ ಮತ್ತು ಅದರಿಂದ ಬಂದ ಲಾಭವನ್ನು ಹಸಿದವರಿಗೆ ಹಂಚಿ ಉಣ್ಣುವುದೇ ನಿಜವಾದ ದೈವತ್ವ. ಆದರೆ ಇಂದು ಇಡೀ ವಿಶ್ವವನ್ನು ಯಂತ್ರ ನಾಗರಿಕತೆಯನ್ನಾಗಿ ಮಾಡಿಕೊಂಡಿದ್ದೇವೆ. ಇವು ಮನುಕುಲವನ್ನು ನಾಶಪಡಿಸುವ ವ್ಯವಸ್ಥೆಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್ ಬಳ್ಳಾಲ್ ಉದ್ಘಾಟಿಸಿದರು. ಸವಿತ ಕರ್ನಾಟಕ ಸಂಪಾದಕ ಮಂಡಳಿ ಗೌರವ ಸಲಹೆಗಾರ ರಾಜನ್ ಹುಣಸವಾಡಿ ಅಭಿನಂದನಾ ಭಾಷಣ ಮಾಡಿದರು. ಮಾಜಿ ಶಾಸಕ ಕೆ ರಘುಪತಿ ಭಟ್, ಎಂಜಿಎಂ ಪ್ರಾಂಶುಪಾಲೆ ವನಿತಾಮಯ್ಯ, ರಂಗಭೂಮಿ ಅಧ್ಯಕ್ಷರು ಶಿವರಾಂ ಶೆಟ್ಟಿ ಉಪಸ್ಥಿತರಿದ್ದರು. ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.