ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಿದರು. 
ಉಡುಪಿ

ಕಠಿಣ ಪರಿಶ್ರಮ ಸಾಧನೆಗೆ ರಹದಾರಿ: ಡಾ. ತಲ್ಲೂರು

ಉಡುಪಿ: ಜೀವನದಲ್ಲಿ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿಯನ್ನು ಬಿಟ್ಟರೆ ಬೇರೊಂದು ಸುಲಭ ದಾರಿಗಳಿಲ್ಲ ಎಂದು ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಶುಕ್ರವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ವತಿಯಿಂದ ರಂಗಭೂಮಿ ಉಡುಪಿ ಸಂಸ್ಥೆಯ ಸಹಯೋಗದಲ್ಲಿ ವಂದೇ ಮಾತರಂ ಯೋಜನೆಯಡಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆಯಲಿರುವ ಸ್ವಾತಂತ್ರ್ಯ ಶರಧಿ ನಾಟಕ ಸಿದ್ಧತಾ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಪದವಿ ಪಡೆಯುವುದೊಂದೇ ವಿದ್ಯಾರ್ಥಿಗಳ ಗುರಿಯಾಗಿರಬಾರದು. ಮಹತ್ತರ ಸಾಧಿಸುವ ಛಲಬೇಕು. ಅದಕ್ಕಾಗಿ ಕಠಿಣ ಪರಿಶ್ರಮ ಹಾಗೂ ಸಿಕ್ಕಿದ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಮುನ್ನಡೆಯಬೇಕು. ರಂಗ ಭೂಮಿ ಉಡುಪಿ ಸಂಸ್ಥೆ ಸಾಧನಾ ಪಥದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ದೇಶ ವಿದೇಶದ ಗಮನ ಸೆಳೆದಿದೆ. ಹೀಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ನಾಟಕ ಸಿದ್ಧತೆ ಜವಾಬ್ದಾರಿ ನೀಡಿದೆ ಎಂದು ಅವರು ತಿಳಿಸಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಮಾತನಾಡಿದರು. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದಿಪಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತನಾಡಿ, ಜುಲೈ 15ರಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕಾಳಿದಾಸ ಜಯಂತಿಯ ಸಂದರ್ಭದಲ್ಲಿ ದೇಶಾದ್ಯಂತ ವಂದೇ ಮಾತರಂ ವಿಚಾರದಲ್ಲಿ ನಾಟಕಗಳು ನಡೆಸಲು ಉದ್ದೇಶಿಸಿದೆ. ಕರ್ನಾಟಕದಲ್ಲಿ ಉಡುಪಿ ಮತ್ತು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಉಡುಪಿಯಲ್ಲಿ ನಾಟಕ ಸಿದ್ಧತೆಗೆ ರಂಗಭೂಮಿ ಉಡುಪಿಗೆ ಅವಕಾಶ ನೀಡಿರುವುದು ಉಡುಪಿಗೆ ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲಿ ಮಾಲತಿ ದೇವಿ, ಉಪ ಪ್ರಾಂಶುಪಾಲ ವಿಶ್ವನಾಥ್​ ಪೈ, ನಾಟಕದ ನಿರ್ದೇಶಕ ಪ್ರಶಾಂತ್​ ಉದ್ಯಾವರ ಉಪಸ್ಥಿತರಿದ್ದರು.