ಡಾ. ತಲ್ಲೂರು ಶಿವರಾಂ ಶೆಟ್ಟಿ.
* ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಗೌರವ
ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಡಾ. ತಲ್ಲೂರು ಶಿವರಾಂ ಶೆಟ್ಟಿ ಅವರ ಸಮಾಜ ಸೇವೆ, ಯಕ್ಷಗಾನ, ಜಾನಪದ, ಧಾರ್ಮಿಕ ಇನ್ನಿತರ ರಂಗಗಳಲ್ಲಿ ನೀಡಿದ ಅನುಪಮ ಸೇವೆ ಗುರುತಿಸಿ 'ರಂಗಮಹೋತ್ಸವ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ ಬೆಂಗಳೂರಿನ ಕಲಾಗ್ರಾಮದಲ್ಲಿ ಇತ್ತೀಚೆಗೆ ನಡೆದ 'ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ' ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ವಿ. ನಾಗರಾಜ ಮೂರ್ತಿ, ಕಲಾವಿದರಾದ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಚಲನಚಿತ್ರ ನಿರ್ದೇಶಕ ಕೆ.ಶಿವರುದ್ರಯ್ಯ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ರವೀಂದ್ರನಾಥ್ ಸಿರಿವರ, ಡಾ. ಟಿ.ಎಚ್. ಲವಕುಮಾರ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ನೀಲಮ್ಮ, ಚಾಂದ್ಪಾಷಾ, ಭಾರತ ರಂಗ ಮಹೋತ್ಸವದ ಸಂಚಾಲಕಿ ಡಾ. ವೀಣಾ ಶರ್ಮ ಭೂಸನೂರಮಠ ಇನ್ನಿತರರು ಉಪಸ್ಥಿತರಿದ್ದರು.
ಯಕ್ಷಗಾನ ಕಲೆಯ ಬೆಳವಣಿಗೆಗೆ ವಿಶೇಷ ಕೊಡುಗೆ
ಡಾ. ತಲ್ಲೂರು ಶಿವರಾಂ ಶೆಟ್ಟಿ ಅವರು ಲಯನ್ಸ್ ಸಂಸ್ಥೆಯಲ್ಲಿ 35 ವರ್ಷಗಳಿಂದ ವಿವಿಧ ಹುದ್ದೆ ಅಲಂಕರಿಸಿ 2018ರಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಸಿಯ ಗವರ್ನರ್ ಆಗಿ ಲಯನ್‌ಗಳಿಗೆ ಮಾದರಿಯಾಗಿದ್ದಾರೆ. ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ 7 ವರ್ಷಗಳ ಕಾಲ ಮುನ್ನಡೆಸಿ ವಿದ್ಯಾಪೋಷಕ್‌ನಂತಹ ಸಾಮಾಜಿಕ ಕಾರ್ಯಗಳನ್ನು ನಿಭಾಯಿಸಿದರು. ಕರ್ನಾಟಕ ಜಾನಪದ ಪರಿಷತ್ನ ಉಡುಪಿ ಜಿಲ್ಲಾಧ್ಯಕ್ಷರಾಗಿ ಜಾನಪದ ಕಲೆ, ಕಲಾವಿದರನ್ನು ಗುರುತಿಸುವ ಕಾರ್ಯ ಮಾಡಿದ್ದಾರೆ. 15 ವರ್ಷಗಳಿಂದ ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇದೀಗ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನ ಕಲೆಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಮಕ್ಕಳಲ್ಲಿ ನೈತಿಕ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ 400ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, 40,000ಕ್ಕೂ ಅಧಿಕ ನೈತಿಕ ಮೌಲ್ಯ ಸಾರುವ ಪುಸ್ತಕಗಳನ್ನು ಹಂಚಿ ಸುಸಂಸ್ಕೃತ ಸಮಾಜ ನಿರ್ಮಾಣದ ಕನಸು ಕಂಡಿದ್ದಾರೆ. ಇವರ ಸೇವೆ ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.