ಉಡುಪಿ: ಬೈಲೂರು 31ನೇ ವಾರ್ಡ್ನ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವರೆಗೆ ಇರುವ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಬೇಕು. ಪಿಪಿಸಿ ಕಾಲೇಜ್ನತ್ತ ಸಾಗುವ ಮುಖ್ಯ ರಸ್ತೆ ಮಾರ್ಗದ ಒಳಚರಂಡಿ ಪೈಪ್ಲೈನ್ ಸಣ್ಣ ಗಾತ್ರದಲ್ಲಿದ್ದು, 13 ವರ್ಷದಿಂದ ಕೊಳಚೆ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್ನ ಮಾಜಿ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ ಕಾಂಚನ್ ಆಗ್ರಹಿಸಿದರು.
ಉಡುಪಿಯ ನಗರಸಭೆಗೆ ಮಂಗಳವಾರ (ನ.3) ನಿಯೋಗದೊಂದಿಗೆ ತೆರಳಿ ಪೌರಾಯುಕ್ತ ಮಹಾಂತೇಶ ಹಂಗರಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ವಾರ್ಡ್ನ ನಾಗರಿಕರಿಗೆ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಳೆಗಾಲ ಮುಗಿದಿದ್ದು, ಡಾಂಬರ್ ಪ್ಲಾಂಟ್ಗಳು ಮತ್ತೆ ಆರಂಭಗೊಂಡಿವೆ. ಹೀಗಾಗಿ ಇನ್ನೂ ವಿಳಂಬ ಮಾಡದೆ ರಸ್ತೆಗೆ ಸಂಪೂರ್ಣವಾಗಿ ಡಾಂಬರ್ ಹಾಕಿಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ, ಈಗಾಗಲೇ ನಗರಸಭೆಯಿಂದ 97 ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿಗೆ ದೊಡ್ಡ ಗಾತ್ರದ ಪೈಪ್ಲೈನ್ ಅಳವಡಿಕೆಗೆ ಹಾಗೂ ರಸ್ತೆಗೆ ಸಂಪೂರ್ಣ ಫೆವರ್ ಫಿನಿಷ್ ಮಾದರಿಯಲ್ಲಿ ಡಾಂರೀಕರಣ ಮಾಡಲಾಗುವುದು. ಒಳಚರಂಡಿ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಪಿಪಿಸಿ ಕಾಲೇಜ್ನತ್ತ ಸಾಗುವ ರಸ್ತೆ ಮಾರ್ಗದ ಒಳಚರಂಡಿ ಕಾಮಗಾರಿ ಸ್ಥಳದಲ್ಲಿ ಬಂಡೆ ಸಿಕ್ಕಿದ್ದರಿಂದ ಕಾಮಗಾರಿಗೆ ತೊಡಕಾಗಿದೆ. ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.
ನಗರಸಭಾ ಮಾಜಿ ಸದಸ್ಯರಾದ ವಿಜಯ ಪೂಜಾರಿ, ನಾಮನಿರ್ದೇಶಿತ ಸದಸ್ಯ ಮೊಹಮ್ಮದ್, ಪ್ರಮುಖರಾದ ಗಣೇಶ ನೆರ್ಗಿ, ಚಂದ್ರಮೋಹನ ಚಿಟ್ಪಾಡಿ, ಸತೀಶಕುಮಾರ್ ಮಂಚಿ, ಸತೀಶ ಕೊಡವೂರು, ಮೊಹಮ್ಮದ್ ಎಸ್., ಸ್ಥಳೀಯರಾದ ಮ್ಯಾಕ್ಸಿಮ್ ಡಿಸೋಜಾ, ಅನಂತಕೃಷ್ಣ ಪ್ರಭು, ಕೃಷ್ಣಾನಂದ ಪೈ, ಪ್ರೀತಿ ಸಾಲಿನ್ಸ್, ಶಹನವಾಜ್, ಕ್ರಿಸ್ಟಿನಾ ಬಂಗೇರ, ಗೀತಾ ರವಿ, ಶೋಭಾ ಭಂಡಾರಿ, ಯಶಸ್ವಿನಿ, ಸಂಜಯ ಆಚಾರ್ಯ, ಪ್ರಜ್ವಲ ಹಾಗೂ ಇತರರಿದ್ದರು.