ಉಡುಪಿಯ ಎರ್ಮಾಳ್ನಲ್ಲಿ ಆಯೋಜಿಸಿದ್ದ 'ರಾಮಕಥಾ' ಕಾರ್ಯಕ್ರಮದಲ್ಲಿ ಪಾಲ್ಗೊಂಡ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸಂತ ಶ್ರೀ ಮುರಾರಿ ಬಾಪುಜಿ ಗೌರವಿಸಿದರು. ಪ್ರವೀಣ್ ಕಾಂಜಿ ತನ್ನಾ ಇತರರಿದ್ದರು.
* ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯ
* ಉಡುಪಿಯಲ್ಲಿ ಮುರಾರಿ ಬಾಪುಜಿಯ 'ರಾಮಕಥಾ'ದಲ್ಲಿ ಭಾಗಿ
ಉಡುಪಿ: ರಾಮಾಯಣವು ಸತ್ಯ, ಘನತೆ, ಕರ್ತವ್ಯ, ತ್ಯಾಗ, ಪ್ರೀತಿ ಮತ್ತು ಸೇವೆಯ ಶಾಶ್ವತ ಸಂದೇಶ ನೀಡುತ್ತದೆ. ಎಷ್ಟೇ ಕಠಿಣ ಪರಿಸ್ಥಿತಿ ಎದುರಾದರೂ ನಮ್ಮ ತತ್ವ, ಕರ್ತವ್ಯಗಳಿಂದ ವಿಮುಖ ಆಗಬಾರದು ಎನ್ನುವುದಕ್ಕೆ ಭಗವಾನ್ ಶ್ರೀರಾಮಚಂದ್ರನ ಜೀವನ ನಿದರ್ಶನವಾಗಿದೆ. ಕುಟುಂಬದಲ್ಲಿ ಮೌಲ್ಯ, ಸಮಾಜದಲ್ಲಿ ಸಾಮರಸ್ಯ ಹಾಗೂ ಜೀವನದಲ್ಲಿ ಶಿಸ್ತು ಬೆಳೆಸಲು ರಾಮಾಯಣ ಪ್ರೇರಣೆ. ಹನುಮ, ಶಬರಿ, ಸುಗ್ರೀವರನ್ನು ಶ್ರೀರಾಮ ಗೌರವಿಸಿದ ರೀತಿ ಸಾಮಾಜಿಕ ಏಕತೆ, ಸಮಾನತೆ ಮತ್ತು ಏಕತೆಯ ಆದರ್ಶ ಸಾರುತ್ತದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಉಡುಪಿಯ ರಾಮಕಥಾ ಸಮಿತಿ ವತಿಯಿಂದ ಪಡುಬಿದ್ರಿ ಎರ್ಮಾಳ್ನಲ್ಲಿ ಮಂಗಳವಾರ (ಸೆ.8) ಆಯೋಜಿಸಿದ್ದ ಸಂತ ಶ್ರೀ ಮುರಾರಿ ಬಾಪುಜಿ ಅವರ 'ರಾಮಕಥಾ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷ್ಣನ ಊರಿನಲ್ಲಿ ರಾಮನ ಅಮೃತ
ಉಡುಪಿಯು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದ್ದು, ಶ್ರೀಕೃಷ್ಣನ ಭಕ್ತಿಯ ನಿರಂತರ ಹರಿವು ಇದೆ. ಶ್ರೀಮಧ್ವಾಚಾರ್ಯರ ಮಹಾನ್ ಪರಂಪರೆಯಿದೆ. ಇಂತಹ ಪವಿತ್ರ ನೆಲದಲ್ಲಿ ಪ್ರಸಿದ್ಧ ನಿರೂಪಕರೂ ಆದ ಮುರಾರಿ ಬಾಪು ಅವರಿಂದ ಶ್ರೀರಾಮನ ಕಥೆಯ ಅಮೃತವೂ ಹರಿಯುತ್ತಿದೆ. ಅವರ ರಾಮಕಥೆ ಆಲಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದ ಆಯೋಜಕ ಪ್ರವೀಣ್ ಕಾಂಜಿ ತನ್ನಾ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ರಾಮಾಯಣವು ಅಹಂಕಾರದ ಬದಲು ನಮ್ರತೆ, ಸ್ವಾರ್ಥದ ಬದಲು ಸೇವೆ, ದ್ವೇಷದ ಬದಲು ಪ್ರೀತಿಯನ್ನು ಪ್ರೇರೇಪಿಸುತ್ತದೆ. ಈ ಶಾಶ್ವತ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ. ವಿಶ್ವಾದ್ಯಂತ ಭಾರತೀಯ ಧರ್ಮ, ಸಂಸ್ಕೃತಿ, ಅಧ್ಯಾತ್ಮ ಹಾಗೂ ಜೀವನ ಮೌಲ್ಯಗಳ ಸಂದೇಶ ಪಸರಿಸುವ ಅಗತ್ಯ ಈಗ ಹೆಚ್ಚಿದೆ. ಆ ನಿಟ್ಟಿನಲ್ಲಿ ಸನಾತನ ಪರಂಪರೆಯ ಆಶಯವನ್ನು ಸಂತರು, ಮಹಾತ್ಮರು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ.