ಕುಂದಾಪುರದ ರಾಜೇಶ್​ ಶೆಟ್ಟಿ ಅಪಹರಣ ಪ್ರಕರಣದಲ್ಲಿ ಬಂಧಿತರಾದ ತೆಲಂಗಾಣ ರಾಜ್ಯದ ನಾಲ್ವರು ಆರೋಪಿಗಳು. 
ಉಡುಪಿ

ಅಪಹರಣ ಪ್ರಕರಣ, ನಾಲ್ವರು ಬಂಧನ

* ತೆಲಂಗಾಣದಲ್ಲಿ ಮಣಿಪಾಲ ಪೊಲೀಸರ ಕಾರ್ಯಾಚರಣೆ

* ಕುಂದಾಪುರದ ರಾಜೇಶ್​ ಮಡಿವಾಳ ರಕ್ಷಣೆ

ಉಡುಪಿ: ಮಣಿಪಾಲದ ಆಸ್ಪತ್ರೆಯಿಂದ ವ್ಯಕ್ತಿಯೋರ್ವನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿದ ಮಣಿಪಾಲ ಠಾಣೆ ಪೊಲೀಸರು ನಲಗೊಂಡ ಜಿಲ್ಲೆಯ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಪಲ್ಲಿ ಮಂಡಲಮ್​ನ ವಡ್ಡಿ ಪಾಟ್ಲ ಪಲ್ಲಗು ತಾಂಡ್ಯದ ರಮಾನಾಥ್​ ಶ್ರೀನು ಬಾಡ್ಯ (30), ಪದಮಡಿ ತಾಂಡ್ಯದ ಮೋಹನ್​ ಆರ್​. ರಮಾವತ್​ (22), ದೇವರಕೊಂಡ ತಾಲೂಕಿನ ಪೆದ್ದಡಿ ಚೆರ್ಲ ಮಂಡಲಮ್​ನ ಚಿಂತಾಲ್​ ತಾಂಡ್ಯದ ಪರಮೇಶ್​ ಎಂ. (30) ಹಾಗೂ ಪಾಲ್ತ್ಯಾ ವಿಜಯ್​ ಸಿ. (25) ಬಂಧಿತರು. ಅಪಹರಣಕ್ಕೊಳಗಾಗಿದ್ದ ಕುಂದಾಪುರ ತಾಲೂಕಿನ ದಾಸರಮಕ್ಕಿ ಗ್ರಾಮದ ರಾಜೇಶ್​ ಮಡಿವಾಳ ಅವರನ್ನು ರಕ್ಷಿಸಲಾಗಿದೆ.

ಅಪಹರಣ ಪ್ರಕರಣದ ಹಿನ್ನೆಲೆ

ದಾಸರಮಕ್ಕಿ ಗ್ರಾಮದ ಲಕ್ಷ್ಮಣ ಮಡಿವಾಳ ಎಂಬವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹಿರಿಯ ಸಹೋದರರಾದ ರಾಮ ಮಡಿವಾಳ, ರಾಜೇಶ್​ ಮಡಿವಾಳ ಹಾಗೂ ಸುಧೀರ್​ ಮಡಿವಾಳ ಎಂಬವರು ಮಣಿಪಾಲದ ಕೆಎಂಸಿಗೆ ಚಿಕಿತ್ಸೆಗೆಂದು ಮಾ.31ರಂದು ಕರೆ ತಂದಿದ್ದರು. ಮಧ್ಯಾಹ್ನ 12:15ರ ವೇಳೆಯಲ್ಲಿ ಆಸ್ಪತ್ರೆಯ ಹೊರಭಾಗದಲ್ಲಿದ್ದ ಕ್ಯಾಂಟೀನ್ನಲ್ಲಿ ರಾಜೇಶ್​ ಮತ್ತು ಸುಧೀರ್​ ಎಂಬವರು ಟೀ ಕುಡಿಯುತ್ತಿದ್ದರು. ಈ ವೇಳೆ ನಂಬರ್​ ಪ್ಲೇಟ್​ ಇಲ್ಲದ ಕಾರೊಂದರಲ್ಲಿ ಆಗಮಿಸಿದ ಏಳೆಂಟು ಜನರು, ರಾಜೇಶ್​ ಅವರನ್ನು ಏಕಾಏಕಿ ಹಿಡಿಯಲು ಮುಂದಾದರು. ಭಯಕ್ಕೊಳಗಾದ ಅವರು ತಪ್ಪಿಸಿಕೊಂಡು ಓಡಿದರೂ ಸಹ ಮತ್ತೆ ಅಡ್ಡಗಟ್ಟಿ ಹಿಡಿದು ಕಾರಿನಲ್ಲಿ ಕೂರಿಸಿಕೊಂಡು ಮಣಿಪಾಲದಿಂದ ಹಿರಿಯಡ್ಕ ರಸ್ತೆ ಮಾರ್ಗವಾಗಿ ತೆರಳಿದ್ದರು.

ಕುಂದಾಪುರ ಠಾಣೆಯಲ್ಲಿ ಕೇಸ್​

ಹಿರಿಯ ಸಹೋದರನ ಅಪಹರಣದ ಬಳಿಕ ರಾಮ ಮಡಿವಾಳ ಎಂಬವರು ಅದೇ ದಿನ ರಾತ್ರಿ 8:15ಕ್ಕೆ ಕುಂದಾಪುರ ಠಾಣೆಗೆ ಬಂದು ಮಣಿಪಾಲದ ಆಸ್ಪತ್ರೆಯಲ್ಲಿ ನಡೆದ ಘಟನೆ ವಿವರಿಸಿ ದೂರು ದಾಖಲಿಸಿದರು. ಕಾರಿನಲ್ಲಿ ಬಂದಿದ್ದ ತೆಲಂಗಾಣದ ವ್ಯಕ್ತಿಗಳು ಅಣ್ಣ ರಾಜೇಶ್​ನೊಂದಿಗೆ ಈ ಹಿಂದೆ ಅವರ ವ್ಯವಹಾರದ ವಿಷಯದಲ್ಲಿ ಮನೆಗೆ ಬಂದಿದ್ದರು. ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್​, ಶಂಕರ್​, ನಾಗೇಶ್​, ಪರಮೇಶ್ವರ್​, ವಿಜಯ್​ ಎಂಬವರಾಗಿದ್ದು ತಮಗೂ ಪರಿಚಯವಿದೆ ಎಂದು ಮಾಹಿತಿ ನೀಡಿದ್ದರು.

ಪೊಲೀಸ್​ ಕಾರ್ಯಾಚರಣೆ

ಆರೋಪಿತರ ಪತ್ತೆಗಾಗಿ ಮಣಿಪಾಲ ಠಾಣೆಯ ಪೊಲೀಸ್​ ನಿರೀಕ್ಷಕ ಮಹೇಶ ಪ್ರಸಾದ್​ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಠಾಣೆಯ ಪಿಎಸ್​ ಐ ತಿಮ್ಮೇಶ್​ ಬಿ.ಎನ್​., ಉಡುಪಿ ಸೈಬರ್​ ಪೊಲೀಸ್​ ಠಾಣೆಯ ಪಿಎಸ್​ಐ ಸುದರ್ಶನ್​ ದೊಡ್ಡಮನಿ, ಅಪರಾಧ ವಿಭಾಗದ ಎಎಸ್​ಐ ವಿವೇಕಾನಂದ, ಎಚ್​ಸಿಗಳಾದ ಮಹಮ್ಮದ್​ ಅಜ್ಮಲ್​ ಹೈಕಾಡಿ, ಚೇತನ್​, ಮಲ್ಪೆ ಠಾಣೆಯ ಲೋಕೇಶ್​, ಉಡುಪಿ ನಗರ ಠಾಣೆಯ ಪಿಸಿ ಶಿವಕುಮಾರ್​, ಬ್ರಹ್ಮಾವರ ಪೊಲೀಸ್​ ಠಾಣೆಯ ಕಿರಣ್​ ಇವರು  ತೆಲಂಗಾಣ ರಾಜ್ಯದ ಜಗತಿಹಾಳ್​ ಜಿಲ್ಲೆಯ  ಕರಿಂ ನಗರದ ಗೋವಿಂದಪಲ್ಲಿ ಎಂಬಲ್ಲಿ ಸಿಲ್ವರ್​ ಸ್ಕೈ ಲಾಡ್ಜ್​ನಲ್ಲಿ ತಂಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದರು. ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ರಾಜೇಶ್​ ಅವರನ್ನು ಪತ್ತೆ ಹಚ್ಚಿ ರಕ್ಷಿಸಿ ಉಡುಪಿಗೆ ಕರೆತಂದಿದ್ದಾರೆ.