ಹರಿಕೃಷ್ಣ ಪುನರೂರು ಕಥಾಬಿಂದು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು 
ಉಡುಪಿ

ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ಜಾರಿಯಾಗಲಿ: ಹರಿಕೃಷ್ಣ ಪುನರೂರು

ಉಡುಪಿ: ಸ್ವಾತಂತ್ರ ಬಳಿಕ ಭಾಷಾವಾರು ಪ್ರಾಂತ ರಚನೆಯಾಯಿತು. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಇದರೊಂದಿಗೆ ಭಾರತದ ಹೆಚ್ಚಿನ ಜನರು ಮಾತನಾಡುವ ಹಿಂದಿ ಮತ್ತು ಅಂತಾರಾಷ್ಟ್ರೀಯ ಭಾಷೆ ಇಂಗ್ಲಿಷ್​ ಮಕ್ಕಳಿಗೆ ಕಲಿಸಬೇಕು. ಹೀಗಾಗಿ ನಾವೆಲ್ಲರೂ ತ್ರಿಭಾಷಾ ಸೂತ್ರವನ್ನು ಬೆಂಬಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್​ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ರಾಜಾಂಗಣದಲ್ಲಿ ಭಾನುವಾರ ಪರ್ಯಾಯ ಶೀರೂರು ಮಠ ಹಾಗೂ ಕೃಷ್ಣ ಮಠದ ಸಹಯೋಗದೊಂದಿಗೆ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ನಡೆದ ಕಥಾಬಿಂದು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡವನ್ನು ಓದುವ ಮತ್ತು ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ. ಸಾಹಿತಿಗಳನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡಪರ ಸೇವೆ ಮಾಡಬೇಕು ಎಂದರು.

ವಿದ್ವಾನ್​ ಕೆ. ವಿ. ರಮಣಾಚಾರ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರಿನ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ. ವಿ. ಪ್ರದಿಪ್​ ಕುಮಾರ್​, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದಿಪ್​ ಕುಮಾರ್​ ಕಲ್ಕೂರ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ಶ್ರೀಪತಿ ಭಟ್​, ಶೀರೂರು ಮಠದ ಬಾಲಚಂದ್ರ ಭಾಗವತ್​, ಪ್ರಮುಖರಾದ ಜಯಾನಂದ ಪೆರಾಜೆ, ಗೋವಿಂದ ಭಟ್​, ವಾಮನ ರಾವ್​ ಬೇಕಲ್​, ಪಡಂಬೈಲು ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು.

ಈ ಸಂರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 'ಕಲಾ ತಿಲಕ' ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಲೇಖಕರ ಒಟ್ಟು 20 ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು.