ಮಳೆನೀರು ಸಮಸ್ಯೆಗೆ ತುತ್ತಾಗಿರುವ ಕರ್ಮಿನ ಅವರ ಮನೆಯಂಗಳಕ್ಕೆ ಟಾರ್ಪಾಲು ಹಾಕಿರುವುದು.
ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಡ್ಯಾರ್ ಅಂಗನವಾಡಿ ಸಮೀಪದ ಒಳರಸ್ತೆಯಲ್ಲಿನ ಅವೈಜ್ಞಾನಿಕ ಕಾಂಕ್ರೀಟ್ ಕಾಮಗಾರಿ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಸ್ಥಳೀಯರು ಮಳೆಗಾಲದಲ್ಲಿ ಜೀವಭಯದಲ್ಲಿ ಬದುಕುವಂತಾಗಿದೆ.
ರಸ್ತೆಯ ಇಕ್ಕೆಲಗಳಿಗಿಂತ ಮಧ್ಯಭಾಗ ತಗ್ಗು ಪ್ರದೇಶದಲ್ಲಿರುವುದರಿಂದ, ಮಳೆ ಬಂದಾಗ ಹರಿದು ಬರುವ ಕೊಳಚೆ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಮನೆಗಳ ಅಡಿಪಾಯ ಕುಸಿಯುತ್ತಿದ್ದು, ಗೋಡೆಗಳು ಬಿರುಕುಬಿಟ್ಟಿವೆ. ಇಲ್ಲಿನ ನಿವಾಸಿಗಳ ಅಂಗಳದಲ್ಲಿ ನೀರು ನಿಲ್ಲುತ್ತಿರುವುದರಿಂದ ವೃದ್ಧರು, ಶಾಲಾ ಮಕ್ಕಳು ಹೊರಬರಲು ಹರಸಾಹಸ ಪಡುವಂತಾಗಿದೆ.
ಬಿರುಕು ಬಿಟ್ಟ ಮನೆಗಳು
ಸ್ಥಳೀಯರಾದ ಈಶ್ವರ್, ರಮೇಶ್, ಕರ್ಮಿನ ಡಿಸೋಜ, ಕೇಶವ, ನಯನಾ, ಗೀತಾ, ಅಪ್ಪಿ ಸುವರ್ಣ, ಪದ್ಮನಾಭ ಶೆಟ್ಟಿ, ರಾಜೇಶ್ ಶೆಟ್ಟಿ, ವಂದನಾ, ಲತಾ ಅವರ ಮನೆಗಳು ಅಪಾಯದ ಅಂಚಿನಲ್ಲಿವೆ. ಈಶ್ವರ್ ನಾಯಕ್ ತಮ್ಮ ಮನೆ ದುರಸ್ತಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರೂ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೆ ಮನೆಗೆ ಅಪಾಯ ತಪ್ಪಿದ್ದಲ್ಲ. ಮಳೆಗಾಲ ಮುಗಿದರೂ ಹಲವು ದಿನ ಒರತೆಯಿಂದ ನೀರು ಹರಿದಾಡುತ್ತಲೇ ಇರುತ್ತದೆ.
ದೂರುಗಳಿಗೆ ಸ್ಪಂದಿಸದ ಪಪಂ
ಕೆಲವು ವರ್ಷಗಳ ಹಿಂದೆ ಆರಂಭಗೊಂಡ ಈ ಸಮಸ್ಯೆ ಪ್ರತಿ ಮಳೆಗಾಲದಲ್ಲೂ ಸ್ಥಳೀಯರನ್ನು ಕಾಡುತ್ತಿದೆ. ಇದರ ಪರಿಣಾಮ ಮಳೆಗಾಲ ಆರಂಭವಾಯಿತೆಂದರೆ ಇಲ್ಲಿನ ನಿವಾಸಿಗರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಇಲ್ಲಿನ ಸಮಸ್ಯೆ ಬಗ್ಗೆ ಹಲವು ವರ್ಷಗಳಿಂದ ಕೋಟೆಕಾರ್ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಚರಂಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿದೆ ಎನ್ನುವ ಲಿಖಿತ ಭರವಸೆ ಹೊರತುಪಡಿಸಿದರೆ, ಕಾಮಗಾರಿ ಮಾತ್ರ ಇದುವರೆಗೂ ಆರಂಭವಾಗಿಲ್ಲ ಎಂಬುದು ಸ್ಥಳೀಯರ ಆರೋಪ.
ಕಳೆದ 10 ವರ್ಷಗಳಿಂದ ಇಲ್ಲಿ ನೆಲೆಸಿದ್ದೇನೆ. ರಸ್ತೆಯ ನೀರು ನುಗ್ಗಿ ಗೋಡೆಗಳು ಬಿರುಕು ಬಿಟ್ಟಿವೆ. ನನ್ನ ಮನೆಯಷ್ಟೇ ಅಲ್ಲದೆ ಸುತ್ತಮುತ್ತಲ ಎಂಟು ಮನೆಗಳಿಗೂ ಅಪಾಯವಿದೆ.
ಕಳೆದ 20 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಅಂಗಳದಲ್ಲಿ ನೀರು ನಿಂತು ಜಾರುವುದರಿಂದ ವಾಸವೇ ಕಷ್ಟವಾಗಿದೆ. ಅಂಗಳಕ್ಕೆ ಟಾರ್ಪಾಲು ಹಾಕಿ ರಕ್ಷಣೆ ಪಡೆಯುವ ಪರಿಸ್ಥಿತಿ ಬಂದಿದೆ.
ನೀರು ಸರಾಗವಾಗಿ ಹರಿಯಲು ಪೈಪ್ ಅಳವಡಿಸಲು ಮೂರು ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಟೆಂಡರ್ ಕರೆಯಲಾಗಿದ್ದರೂ ಯಾರೂ ಮುಂದೆ ಬಂದಿಲ್ಲ. ಈಗ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು.