ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಹರಿಯುತ್ತಿರುವ ನೀರು.
ಕಡಬ: ಕೊಲ ಭಾಗದ ಹಲವು ಕಡೆಯಲ್ಲಿ ಮಳೆ ನೀರು ಚರಂಡಿಗಳಲ್ಲಿ ಹರಿದು ಹೋಗದೆ ರಸ್ತೆಯಲ್ಲೇ ಹರಿಯುತ್ತಿದ್ದು ವಾಹನ ಸವಾರರು, ಪಾದಚಾರಿಗಳು ಅವಘಡಕ್ಕೆ ತುತ್ತಾಗುತ್ತಿದ್ದಾರೆ.
ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕೊಲ ಸಮೀಪದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಕ್ಯಾಂಪಸ್ ಒಳಗಡೆಯಿಂದ ಭಾರೀ ಪ್ರವಾಣದಲ್ಲಿ ಹರಿದು ಬರುವ ಮಳೆ ನೀರು ಚರಂಡಿ ಸೇರದೆ ಹೆದ್ದಾರಿ ಮೇಲೇ ಹರಿಯುತ್ತಿದೆ. ಇದರಿಂದ ರಸ್ತೆಯ ತಿರುವು ಅಂದಾಜಿಸಲಾಗದೆ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಲದಿಂದ ಮುಂದೆ ವಿದ್ಯುತ್ ಉಪಕೇಂದ್ರ ಇದ್ದು, ಅಲ್ಲಿಂದ ಮುಂದೆ ಸಾಗುವಾಗ ಅಪಾಯಕಾರಿ ತಿರುವು ಇದೆ. ಈ ತಿರುವು ರಸ್ತೆಯಲೇ ಮಳೆ ನೀರು ಹರಿದು ಹೋಗುತ್ತಿದ್ದು, ನೀರನ್ನು ತಪ್ಪಿಸುವ ಉದ್ದೇಶದಿಂದ ವಾಹನ ಸವಾರರು ಸಂಚರಿಸಿದಾಗ ಅವಘಡಗಳಾಗುವ ಅಪಾಯವಿದೆ.
ಈಗಾಗಲೇ ಈ ತಿರುವು ರಸ್ತೆ ಅಪಘಾತ ವಲಯವಾಗಿದ್ದು, ವಾರದ ಹಿಂದೆಯಷ್ಟೇ ಜೀಪು ಹಾಗೂ ಬೈಕ್ ನಡುವೆ ಅಪಘಾತವಾಗಿತ್ತು. ಕೊಯಿಲಗಂಡಿಬಾಗಿಲು ರಸ್ತೆಯಲ್ಲಿಯೂ ಇದೇ ಅವ್ಯವಸ್ಥೆಯಿದೆ. ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.