ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಕಾರ್ಯ ಭರದಿಂದ ನಡೆಯುತ್ತಿದ್ದು, ಎಣಿಕೆ ನಮೂನೆಗಳ ಹಂಚಿಕೆ ಹಾಗೂ ಸಂಗ್ರಹ ಕಾರ್ಯಕ್ಕೆ ಮಳೆ ಸವಾಲೊಡ್ಡಿದೆ. ಕಳೆದ ಮೂರು ವಾರಗಳ ಹಿಂದೆ ಪ್ರಕ್ರಿಯೆ ಆರಂಭಗೊಂಡಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತದಾರರನ್ನು ತಲುಪಲು ಬಿಎಲ್‌ಗಳು ಸಂಕಷ್ಟ ಪಡುವಂತಾಗಿದೆ.
ಜೂನ್ 29ರಿಂದ ಎಸ್‌ಐಆರ್ ದಾಖಲಾತಿಗಾಗಿ ಮನೆ ಮನೆ ಭೇಟಿ ಆರಂಭಿಸಿರುವ ಬಿಎಲ್‌ಒಗಳು ಬಹುತೇಕ ಎಲ್ಲ ಮತದಾರರಿಗೆ ಎಣಿಕೆ ನಮೂನೆ(ಅರ್ಜಿ) ವಿತರಿಸಿದ್ದು, ಬಹುತೇಕ ಮಂದಿ ಅರ್ಜಿಯನ್ನು ತುಂಬಿಸಿ ವಾಪಸ್ ನೀಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಎಸ್‌ಐಆರ್ ಕಾರ್ಯಕ್ಕೆ ತೊಡಕನ್ನುಂಟು ಮಾಡುತ್ತಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರನ್ನು ಭೇಟಿ ಮಾಡಲು ಹೊಲ, ಗದ್ದೆ, ತೋಡುಗಳನ್ನು ದಾಟಿ ಹೋಗಬೇಕಿದ್ದು, ಸುರಿಯುತ್ತಿರುವ ಮಳೆ ನಡುವೆ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸುವುದು ಬಿಎಲ್‌ಒಗಳಿಗೆ ಸವಾಲಿನ ಕೆಲಸವಾಗಿದೆ. ವಿಶೇಷ ಪರಿಷ್ಕರಣೆ ಕಾರ್ಯಕ್ಕಾಗಿ ಅಂಗನವಾಡಿ ಶಿಕ್ಷಕಿಯರನ್ನು ಶೇ.100ರಷ್ಟು ನಿಯೋಜಿಸಲಾಗಿದ್ದು, ಸರ್ಕಾರಿ ಶಾಲೆಯ ಆಯ್ದ ಶಿಕ್ಷಕರು ಒಳಗೊಂಡಿದ್ದಾರೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ಕಾಗಿ ಮತದಾರರಿಗೆ ಮಾಹಿತಿ ಸಂಗ್ರಹ ನಮೂನೆಗಳನ್ನು ವಿತರಿಸಿ, ಸಂಗ್ರಹಿಸಲು ಅಂಗನವಾಡಿ ಶಿಕ್ಷಕಿಯರು ಪ್ರತಿ ಮನೆಗೂ ತೆರಳಬೇಕಾಗಿರುವುದರಿಂದ ಅಂಗನವಾಡಿ ಕೇಂದ್ರದ ಹೊಣೆಗಾರಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಶಿಕ್ಷಕಿಯರ ಅನುಪಸ್ಥಿತಿಯಲ್ಲಿ ಈಗ ಸಹಾಯಕಿಯರು ಅಂಗನವಾಡಿ ನೋಡಿಕೊಳ್ಳಬೇಕಿದೆ. ಕೆಲವೊಂದು ಅಂಗನವಾಡಿಯಲ್ಲಿ ಸಹಾಯಕಿಯರ ಕೊರತೆಯಿದೆ. ಪರಿಷ್ಕರಣೆಗೆ ಅಂಗನವಾಡಿ ಶಿಕ್ಷಕಿ ಹೊರಟರೆ ಕೇಂದ್ರ ಮುನ್ನಡೆಸಲಾಗದ ಸ್ಥಿತಿ ಎದುರಾಗಿದೆ.
ಎರಡು ಸೂಕ್ಷ್ಮ ಮತ್ತು ಜವಾಬ್ದಾರಿಯುತ ಕೆಲಸ ನಿರ್ವಹಿಸುವ ಒತ್ತಡದಲ್ಲಿದ್ದೇವೆ. ಎಸ್‌ಐಆರ್ ಆರಂಭಗೊಂಡ ದಿನದಿಂದ ಮಳೆ ಅಬ್ಬರಿಸುತ್ತಿದೆ. ಗದ್ದೆ, ಬಯಲು, ತೋಟ ದಾಟಿಕೊಂಡು ಹೋಗುವುದೇ ಸವಾಲಾಗಿದೆ. ಶೇ.100ರಷ್ಟು ಅಂಗನವಾಡಿ ಶಿಕ್ಷಕಿಯರನ್ನು ಪ್ರಕ್ರಿಯೆಗೆ ನಿಯೋಜಿಸಲಾಗಿದೆ. ಅಂಗನವಾಡಿ ಜವಾಬ್ದಾರಿಯಲ್ಲಿ ಸದ್ಯ ವ್ಯತ್ಯಾಸವಾಗುತ್ತಿದೆ. ಸರ್ಕಾರದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಶ್ರಮಿಸುತ್ತಿದ್ದೇವೆ.
— ಫಿಲೋಮಿನಾ ಫರ್ನಾಂಡಿಸ್ ಅಂಗನವಾಡಿ ಕಾರ್ಯಕರ್ತೆ, ಗಂಗೊಳ್ಳಿ
ಮತದಾರರ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ನಮೂನೆಗಳ ವಿತರಣೆಯಲ್ಲಿ ಕೊರತೆಯಾಗಿಲ್ಲ. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೊರತೆ ಇರುವ ಬಗ್ಗೆ ಮತದಾರರು ತಿಳಿಸಿದಲ್ಲಿ ಕೂಡಲೇ ವ್ಯವಸ್ಥೆ ಮಾಡಲಾಗುವುದು. ವಿಶೇಷ ತೀವ್ರ ಪರಿಷ್ಕರಣೆ ಎಂಬುದು ಭಾರತ ಚುನಾವಣಾ ಆಯೋಗ ನಡೆಸುವ ಬೃಹತ್ ಮನೆ- ಮನೆ ಮತದಾರರ ಪರಿಶೀಲನಾ ಅಭಿಯಾನವಾಗಿದೆ. ಬೂತ್‌ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಎಣಿಕೆ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸುತ್ತಿದ್ದಾರೆ. ನಾಗರಿಕರು ತಮ್ಮ ಹೆಸರನ್ನು ಸರಿಯಾಗಿ ನೋಂದಾಯಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬಿಎಲ್‌ಒಗಳಿಗೆ ಸಹಕರಿಸಬೇಕು.
— ರಶ್ಮಿ ಎಸ್.ಆರ್. ಸಹಾಯಕ ಕಮಿಷನರ್, ಕುಂದಾಪುರ