ಉಡುಪಿಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ಕಬ್ಬಿಣ ಏಣಿ ಅಳವಡಿಸಿದ ವಿಶು ಶೆಟ್ಟಿ ಅಂಬಲಪಾಡಿ.
* ಸಮಸ್ಯೆ ನಿವಾರಿಸಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ
* ಇಂದ್ರಾಳಿ ಮೇಲ್ಸೇತುವೆ ಬಳಿ ಕಬ್ಬಿಣದ ಏಣಿ ನಿರ್ಮಾಣ
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ದಾಟಲು ರೈಲು ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಅನುಭವಿಸುತ್ತಿದ್ದ ಹೀನಾಯ ಸ್ಥಿತಿ ಅಂತ್ಯಕಂಡಿದೆ. ಇಲ್ಲಿನ ಸಮಸ್ಯೆ ಕುರಿತು 'ವಿಜಯವಾಣಿ' ಪ್ರಕಟಿಸಿದ್ದ ವಿಶೇಷ ವರದಿಗೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಸ್ಪಂದಿಸಿದ್ದಾರೆ.
ತನ್ನ ಸ್ವಂತ ಖರ್ಚಿನಲ್ಲಿ ಕಬ್ಬಿಣದ ಏಣಿ ನಿರ್ಮಿಸುವ ಮೂಲಕ ಅಲ್ಲಿದ್ದ ಸಮಸ್ಯೆಯನ್ನು ವಿಶು ಶೆಟ್ಟಿ ತಾತ್ಕಾಲಿಕವಾಗಿ ನೀಗಿಸಿದ್ದಾರೆ. ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಇಂದ್ರಾಳಿಯಲ್ಲಿ ರಸ್ತೆ ದಾಟಲು ತೊಂದರೆ ಆಗುತ್ತಿರುವ ವಿಚಾರ ತಿಳಿದಿದ್ದರೂ ಸಹ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸಿದ್ದರು.
ಇಂದ್ರಾಳಿಯ ಶಾಲಾ ಮಕ್ಕಳಿಗೆ ನಿತ್ಯ ಗೋಳು
ರೈಲ್ವೆ ಮೇಲ್ಸೇತುವೆಯ ಪಕ್ಕದಲ್ಲಿಯೇ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದ್ದು, ಮಣಿಪಾಲ ಕಡೆಯಿಂದ ಖಾಸಗಿ ಬಸ್ ಮೂಲಕ ನಿತ್ಯವೂ ನೂರಾರು ಮಕ್ಕಳು ಆಗಮಿಸಿ ಇಂದ್ರಾಳಿ ಮಸೀದಿ ಬಳಿ ಇಳಿಯುತ್ತಿದ್ದರು. ಬಳಿಕ ಇನ್ನೊಂದು ಪಾರ್ಶ್ವದಲ್ಲಿ (ಉಡುಪಿ-ಮಣಿಪಾಲ ಮಾರ್ಗ) ಇರುವ ರಸ್ತೆಗೆ ತೆರಳಲು ರೈಲ್ವೆ ಗರ್ಡರ್ ಬ್ರಿಡ್ಜ್ ಸಮೀಪದಲ್ಲಿ ರಸ್ತೆ ವಿಭಾಜಕದ ಗೋಡೆ ಏರಿ, ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಸಾಗುತ್ತಿದ್ದರು. ರೈಲ್ವೆ ಪ್ರಯಾಣಿಕರೂ ಸಹ ಗೋಡೆ ಏರಿಯೇ ಅತ್ತಿಂದಿತ್ತ ಸಾಗುತ್ತಿದ್ದರು.
ಹಲವರಿಗೆ ಗಾಯ
ಇಂದ್ರಾಳಿ ಸೇತುವೆ ಬಳಿ ರಸ್ತೆ ದಾಟುವ ಸ್ಥಳ ಎತ್ತರದಲ್ಲಿದೆ. ಸೂಕ್ತ ಮೆಟ್ಟಿಲೂ ಇಲ್ಲ. ಹೀಗಾಗಿ ಈ ಹಿಂದೆ ಯಾರೋ ಪ್ರಯಾಣಿಕರೇ ಕಲ್ಲುಗಳ ಮೇಲೆ ಕಲ್ಲು ಜೋಡಿಸಿ ಅದರ ಮೇಲೆ ಹತ್ತಿ ಸಾಗಿದ್ದರು. ಬಳಿಕ ಅದೇ ವ್ಯಸವ್ಥೆ ಇಲ್ಲಿ ಶಾಶ್ವತವಾಗಿತ್ತು. ಚಿಕ್ಕಪುಟ್ಟ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಕಂಕುಳಲ್ಲಿ ಮಗು ಇಟ್ಟುಕೊಂಡಿರುವ ತಾಯಂದಿರು ಅಪಾಯಕರ ರೀತಿಯಲ್ಲಿ ಕಲ್ಲನ್ನೇರಿ ರಸ್ತೆ ದಾಟುತ್ತಿದ್ದರು. ಕೆಲ ಮಹಿಳೆಯರು, ವೃದ್ಧರು ಆಯತಪ್ಪಿ ಬಿದ್ದು ಗಾಯವನ್ನೂ ಮಾಡಿಕೊಳ್ಳುತ್ತಿದ್ದರು.
ಸಾರ್ವಜನಿಕರ ಆಕ್ರೋಶ
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗರ್ಡರ್ ಮೇಲ್ಸೇತುವೆ ನಿರ್ಮಿಸುವಾಗಲೇ ಇಲ್ಲಿ ರಾ.ಹೆ. ಅಧಿಕಾರಿಗಳು ಅಥವಾ ಕಾಮಗಾರಿ ಗುತ್ತಿಗೆ ಪಡೆದವರು ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಈ ವಿಚಾರವನ್ನು 'ವಿಜಯವಾಣಿ'ಯು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೂ ತಂದಿತ್ತು. 'ಅಲ್ಲಿ ಮೆಟ್ಟಿಲು ನಿರ್ಮಿಸಿದರೆ ಅಪಘಾತವಾಗುತ್ತದೆ ಎಂದು ರಾ.ಹೆ. ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ' ಎಂದು ಸಂಸದ ಕೋಟ ಪ್ರತಿಕ್ರಿಯೆ ನೀಡಿದ್ದರು. ಅಲ್ಲಿ ಅಪಘಾತವಾಗುತ್ತದೆ ಎಂದಾದರೆ ರಸ್ತೆ ದಾಟುವುದು ಹೇಗೆ ಎಂದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈಲ್ವೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಸ್ವಂತ ಖರ್ಚಿನಲ್ಲಿ ಮೆಟ್ಟಿಲು ವ್ಯವಸ್ಥೆ
ಇಂದ್ರಾಳಿ ರೈಲ್ವೆ ಮೇಲ್ಸೇತವೆ ಬಳಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಕುರಿತು 'ವಿಜಯವಾಣಿ' 2025ರ ನ.23 ಹಾಗೂ ಡಿ.27ರಂದು ಎರಡು ಬಾರಿ ವರದಿ ಪ್ರಕಟಿಸಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಅಸಡ್ಡೆ ತೋರಿದ್ದರು. ಆದರೆ, ಜನರಿಗೆ ಯಾವುದೇ ಸಂಕಷ್ಟ ಉಂಟಾದಾಗ ನಿವಾರಿಸಲು ಉಡುಪಿಯಲ್ಲಿರುವ ಪ್ರಮುಖ ಮೂವರು ಸಮಾಜಸೇವಕರು ಪ್ರತ್ಯಕ್ಷರಾಗುತ್ತಾರೆ. ಅವರಲ್ಲಿ ಓರ್ವರಾದ ವಿಶು ಶೆಟ್ಟಿ ಅಂಬಲಪಾಡಿ 'ವಿಜಯವಾಣಿ' ವರದಿ ಹಿನ್ನೆಲೆಯಲ್ಲಿ ಕಳೆದ 15 ದಿನದ ಹಿಂದೆ 16,500 ರೂ. ಸ್ವಂತ ಹಣ ವ್ಯಯಿಸಿ ಕಬ್ಬಿಣದ ಏಣಿ ಸಿದ್ಧಗೊಳಿಸುತ್ತಿದ್ದರು. ಅದನ್ನು ಇಂದ್ರಾಳಿ ಸೇತುವೆಯ ಬಳಿ ಭಾನುವಾರ (ಜ.4) ಬೆಳಗ್ಗೆ ಅಳವಡಿಸಿದ್ದಾರೆ. ಇದೀಗ ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೆ ಏಣಿ ಏರುವ ಮೂಲಕ ಸುಲಭವಾಗಿ ರಸ್ತೆ ದಾಟುತ್ತಿದ್ದಾರೆ. ವಿಶು ಶೆಟ್ಟಿ ಅವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವೃದ್ಧರು, ಮಹಿಳೆಯರು ಇಲ್ಲಿ ಕಲ್ಲನ್ನೇರಿ ಅತ್ತ ಸಾಗಲು ಬಹಳ ಪ್ರಯಾಸ ಪಡುತ್ತಿದ್ದರು. ಅದನ್ನು 'ವಿಜಯವಾಣಿ'ಯೂ ಗಮನ ಸೆಳೆದಿತ್ತು. ಪ್ರಯಾಣಿಕರು ಕಲ್ಲಿನ ಮೇಲೆ ಹತ್ತುವಾಗ ಸಮತೋಲನ ತಪ್ಪಿ ಬಿದ್ದರೆ ಎಲುಬು ಮುರಿಯುವುದು ಖಚಿತ. ಅಲ್ಲಾಗುವ ದುರಂತ ತಪ್ಪಿಸಲು 16,500 ರೂ. ಸ್ವಂತ ಖರ್ಚಿನಲ್ಲಿ ಕಬ್ಬಿಣದ ಏಣಿ ನಿರ್ಮಿಸಿ ಅಳವಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಲಾಖೆ ಶಾಶ್ವತ ವ್ಯವಸ್ಥೆ ಕಲ್ಪಿಸಿದರೆ ಮೆಟ್ಟಿಲು ಏಣಿಯನ್ನು ವಾಪಸ್ ಪಡೆಯುತ್ತೇನೆ. ಉಡುಪಿ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡನೀಯ.