ಕುಸಿದಿರುವ ಕಾರ್ಯವನ್ನು ದುರಸ್ತಿಗೊಳಿಸಲಾಯಿತು.
ಕಡಬ: ಕೇಂದ್ರ ಸರ್ಕಾರದ ಅಮೃತ ಭಾರತ್ ಯೋಜನೆಯಡಿ ಕಡಬ ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಬಜಕರೆಯಲ್ಲಿ ನಿರ್ಮಿಸಲಾದ ನೂತನ ರೈಲ್ವೆ ಮೇಲ್ಸೇತುವೆಯ ಸಂಪರ್ಕ ಕಾಂಕ್ರೀಟ್ ರಸ್ತೆ ನಿರಂತರ ಮಳೆಗೆ ಕುಸಿದುಬಿದ್ದಿದೆ. ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬುಧವಾರ ದುರಸ್ತಿ ಕಾರ್ಯ ಮಾಡಲಾಯಿತು.
ಮೈಸೂರು ರೈಲ್ವೆ ವಿಭಾಗದ ವ್ಯಾಪ್ತಿಗೆ ಒಳಪಡುವ ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದ ಮಧ್ಯೆ ನಿರ್ಮಿಸಲಾಗುತ್ತಿರುವ ನಾಲ್ಕು ರೈಲ್ವೆ ಮೇಲ್ಸೇತುವೆಗಳ ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿವೆ.
ಕಾಮಗಾರಿಯನ್ನು ತುರ್ತಾಗಿ ಮುಗಿಸುವ ಭರದಲ್ಲಿ ಗುಣಮಟ್ಟ ಗಾಳಿಗೆ ತೂರಿ ರಸ್ತೆ ನಿರ್ಮಿಸಿದ್ದರಿಂದಲೇ ಮಳೆಯ ನೀರಿಗೆ ತಡೆಗೋಡೆ ಹಾಗೂ ರಸ್ತೆಯ ತಳಭಾಗದ ಮಣ್ಣು ಸಡಿಲಗೊಂಡು ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು ಮೂಡಿ ಕುಸಿಯುವ ದುಸ್ಥಿತಿಗೆ ತಲುಪಿದೆ ಎಂದು ದೂರಲಾಗಿದೆ. ಗುತ್ತಿಗೆ ಸಂಸ್ಥೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕುಸಿದಿರುವ ಕಾಂಕ್ರೀಟ್ ರಸ್ತೆಯನ್ನು ದುರಸ್ತಿಗೊಳಿಸಿದೆ.