ಪ್ರಜಾಸೇವೆ ಅಭಿಯಾನ ಸಭೆಯಲ್ಲಿ ಶಾಸಕ ಭರತ್ ಶೆಟ್ಟಿ ಅಹವಾಲುಗಳನ್ನು ಸ್ವೀಕರಿಸಿದರು. ತಹಸೀಲ್ದಾರ್ ರಮೇಶ್ ಬಾಬು, ಪಶು ವೈದ್ಯಾಧಿಕಾರಿ ಡಾ.ಅಶೋಕ್ ಮತ್ತಿತರರಿದ್ದರು.
ಗುರುಪುರ: ಜನರ ಸಮಸ್ಯೆಗಳಿಗೆ ಒಂದೇ ವೇದಿಕೆಯಡಿ ಪರಿಹಾರ ಸಿಗಬೇಕೆನ್ನುವ ಉದ್ದೇಶದಿಂದ ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯುವ ಒಂದು ಉತ್ತಮ ಕೆಲಸ ‘ಪ್ರಜಾಸೇವೆ ಅಭಿಯಾನ ಸಭೆ’. ಇನ್ನೂ ಒಂದೆರಡು ಪ್ರಜಾಸೇವೆ ಸಭೆಯ ಬಳಿಕ ಯಾವ ಇಲಾಖೆಗಳಿಂದ ಹೆಚ್ಚು ಕೆಲಸ ಆಗಬೇಕಿದೆ ಎಂಬ ಅಂಕಿಅಂಶ ತಿಳಿದು ಬರಲಿದ್ದು, ಆ ವೇಳೆ ಉಳಿದ ಇಲಾಖೆಗಳ ಎಲ್ಲ ಅಧಿಕಾರಿಗಳು ಸಭೆಯಿಂದ ಹೊರಗುಳಿದು ಇಲಾಖಾ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾಮಂಜೂರು ಚರ್ಚ್ ಸಭಾಗೃಹದಲ್ಲಿ ಸೆ.19ರಂದು ಪ್ರಜಾಸೇವೆ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ 3ನೇ ಸಭೆ ಇದಾಗಿದೆ. ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು. ಮಂಗಳೂರು ನಗರಪಾಲಿಕೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನೂರಾರು ಮಂದಿ ಸಮಸ್ಯೆಗಳೊಂದಿಗೆ ಆಗಮಿಸಿದ್ದು ಶಾಸಕರು, ತಹಸೀಲ್ದಾರ್, ಇಲಾಖಾ ಅಧಿಕಾರಿಗಳು ತ್ವರಿತ ಸ್ಪಂದನೆ ನೀಡಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಹೇಮಲತಾ, ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಶೋಕ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಪಿಡಬ್ಲ್ಯೂಡಿ ಎಡಬ್ಲ್ಯೂಇ ಹೇಮಂತ್, ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ವಾಮಂಜೂರು ಪಿಎಸ್‌ಐ ಅರುಣ್ ಕುಮಾರ್, ಗುರುಪುರ ನಾಡಕಚೇರಿ ಉಪತಹಸೀಲ್ದಾರ್ ಸ್ಟೀಫನ್, ಕಂದಾಯ ಅಧಿಕಾರಿ ಪೂರ್ಣಚಂದ್ರ ತೇಜಸ್ವಿ, ಕಾರ್ಮಿಕ ಇಲಾಖಾಧಿಕಾರಿ ವಿಲ್ಮಾ, ಆಯೂಷ್ ಅಧಿಕಾರಿ ಡಾ.ಮುರಳೀಧರ ಹಾಗೂ ಹಲವು ಪ್ರಮುಖ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ತಿರುವೈಲು ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಂದಾಯ ಇಲಾಖೆ ಸಿಬ್ಬಂದಿ ಗಂಗಾಧರ ನಿರೂಪಿಸಿದರು. ----