ಸುರೇಶ್ ಗೋಪಿ. ಕೇಂದ್ರದ ರಾಜ್ಯ ಖಾತೆ ಪೆಟ್ರೋಲಿಯಂ ಸಚಿವ.
* ಸಂಸದ ಕೋಟ ಪ್ರಶ್ನೆಗೆ ಪೆಟ್ರೋಲಿಯಂ ಸಚಿವ ಉತ್ತರ
* 2034ರೊಳಗೆ ದೇಶದಲ್ಲಿ 18,336 ಘಟಕ ಸ್ಥಾಪಿಸುವ ಗುರಿ
ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಸಿಎನ್ಜಿ ಕೊರತೆ ಮತ್ತು ಸರಬರಾಜು ಸಮಸ್ಯೆಯಿಂದ ಉಡುಪಿ ಜಿಲ್ಲೆಯಲ್ಲಿ ರಿಕ್ಷಾ ಚಾಲಕರು ಮತ್ತು ಇನ್ನಿತರ ವಾಹನಗಳ ಮಾಲೀಕರು ಕಿಲೋ ಮೀಟರ್ ಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಹೀಗಾಗಿ ರಾಜ್ಯದ ಕರಾವಳಿ ಭಾಗಕ್ಕೆ ಹೆಚ್ಚುವರಿ ಸಿಎನ್ಜಿ ಸರಬರಾಜು ಮಾಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದೆಹಲಿಯ ಸಂಸತ್ ಅಧಿವಶೇನದಲ್ಲಿ ಮಂಗಳವಾರ (ಡಿ.9) ಲಿಖಿತ ಪ್ರಶ್ನೆ ನೀಡಿದರು.
ಸಂಸದ ಪೂಜಾರಿ ಲಿಖಿತ ಪ್ರಶ್ನೆಗೆ ಕೇಂದ್ರದ ರಾಜ್ಯ ಖಾತೆ ಪೆಟ್ರೋಲಿಯಂ ಸಚಿವ ಸುರೇಶ್ ಗೋಪಿ ಉತ್ತರಿಸಿ, ತಮ್ಮ ಕರಾವಳಿ ಜಿಲ್ಲೆಯೂ ಸೇರಿದಂತೆ ಎಲ್ಲೆಡೆ ಇರುವ ಸಿಎನ್ಜಿ ಸಮಸ್ಯೆ ಶೀಘ್ರ ಪರಿಹರಿಸಲಾಗುವುದು. ಅದಕ್ಕೆ ಪೂರಕ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.
ಗುರಿಗಿಂತ ಹೆಚ್ಚು ಪ್ರಗತಿ
ದೇಶಾದ್ಯಂತ 2034ನೇ ಇಸವಿಯೊಳಗೆ 18,336 ಸಿಎನ್ಜಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ. 2025ರ ಸೆ.30ರ ವರೆಗೆ ಒಟ್ಟು 5,826 ಸಿಎನ್ಜಿ ಕೇಂದ್ರ ಸ್ಥಾಪಿಸುವ ಗುರಿ ಇತ್ತು. ಬಹು ಬೇಡಿಕೆ ಹಿನ್ನೆಲೆಯಲ್ಲಿ 8,357 ಸಿಎನ್ಜಿ ಕೇಂದ್ರ ಸ್ಥಾಪಿಸಲಾಗಿದ್ದು, ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸಿಎನ್ಜಿ ಬೇಡಿಕೆ ಮತ್ತು ನೈಸರ್ಗಿಕ ಅನಿಲದ ಲಭ್ಯತೆಯ ಮೇರೆಗೆ ಹೆಚ್ಚಿನ ಸಿಎನ್ಜಿ ಮಾರಾಟ ಕೇಂದ್ರ ತೆರೆಯಲಾಗುತ್ತಿದೆ ಎಂದು ಸಚಿವ ತಿಳಿಸಿದರು.
ಜಿಲ್ಲೆಗಳಲ್ಲಿ ಸಭೆ ನಡೆಸಲು ಆದೇಶ
ಈಗಿರುವ ಮಾರಾಟ ಕೇಂದ್ರಗಳನ್ನು ಆನ್ಲೈನ್ ಸ್ಟೇಷನ್ಗಳಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸಿಜಿಡಿ (ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್) ಘಟಕಗಳಿಗೆ ಸೂಚನೆ ನೀಡಲಾಗಿದೆ. ಅದರಿಂದ ವಾಹನಗಳಿಗೆ ಸಕಾಲಕ್ಕೆ ಹಾಗೂ ತ್ವರಿತವಾಗಿ ಇಂಧನ ತುಂಬಿಸಲು ಸಹಾಯವಾಗುತ್ತದೆ. ಸಿಎನ್ಜಿ ತಾಂತ್ರಿಕತೆ ತೊಂದರೆ ಮತ್ತು ವಿತರಕರ ಗೊಂದಲವಿದ್ದರೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಆದೇಶ ನೀಡಲಾಗುವುದು ಎಂದು ಸಚಿವ ಸುರೇಶ್ ಗೋಪಿ ತಿಳಿಸಿದರು.
ದೇಶಾದ್ಯಂತ ನೈಸರ್ಗಿಕ ಪೈಪ್ಲೈನ್ ವ್ಯವಸ್ಥೆ
ನೈಸರ್ಗಿಕ ಅನಿಲದ ಲಭ್ಯತೆ ಹೆಚ್ಚಿಸಲು ಪಿಎನ್ಜಿಆರ್ಬಿ (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ) ಮೂಲಕ ಸುಮಾರು 34,223 ಕಿ.ಮೀ. ಉದ್ದದ ನೈಸರ್ಗಿಕ ಪೈಪ್ಲೈನ್ ವ್ಯವಸ್ಥೆ ಅಳವಡಿಕೆಗೆ 'ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್' ಕಲ್ಪನೆಯಡಿ ಕಾರ್ಯಗತ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದೇ ವರ್ಷ 2025ರಲ್ಲಿ 25,429 ಕಿ.ಮೀ ಉದ್ದ ಹಾಗೂ 10,459 ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್ಲೈನ್ ನಿರ್ಮಾಣದ ಕಾಮಗಾರಿ ವಿವಿಧ ಹಂತದಲ್ಲಿದೆ. ಅದರೊಂದಿಗೆ ದೇಶದಲ್ಲಿ 6,20,428 ಕಿ.ಮೀ. ಗಾತ್ರದ ಕಿರು ಇಂಚ್ ಪೈಪ್ಲೈನ್ ಅಳವಡಿಕೆಯೂ ಪ್ರಗತಿಯಲ್ಲಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು, ಹಾಸನ ಕೊಡಗು ಜಿಲ್ಲೆಗಳ ಸಿಎನ್ಜಿ ನೆಟ್ವರ್ಕ್ ಅಭಿವೃದ್ಧ್ಧಿಗಾಗಿ ಎಜಿಪಿ ಸಿಟಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ಗೆ ಅಧಿಕಾರ ನೀಡಲಾಗಿದೆ. ಸದರಿ ಜಿಲ್ಲೆಗಳಲ್ಲಿ ಪೈಪ್ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಸಲು ದಾಬೋಲ್ ಬೆಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಕಾರ್ಯನಿರ್ವಹಿಸುತ್ತಿದೆ. ಎಂಡಬ್ಲ್ಯುಪಿ (ಕನಿಷ್ಠ ಕಾರ್ಯ ಯೋಜನೆ) ಪ್ರಕಾರ 2029ರ ವೇಳೆಗೆ 121 ಹೆಚ್ಚುವರಿ ಸಿಎನ್ಜಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಉಳಿಕೆ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಸಚಿವ ಸುರೇಶ್ ಗೋಪಿ ಲಿಖಿತ ಉತ್ತರ ನೀಡಿದ್ದಾರೆ.