ವಂಡ್ಸೆ ಹೋಬಳಿಯ ತಲ್ಲೂರು ಹಾಗೂ ದೇವಲ್ಕುಂದ ಗ್ರಾಮಗಳ ಫಲಾನುಭವಿಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ 94ಸಿ ಹಕ್ಕು ಪತ್ರ ವಿತರಿಸಿದರು. ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಉಪಸ್ಥಿತರಿದ್ದರು. 
ಉಡುಪಿ

ಕಡತಗಳ ತ್ವರಿತ ವಿಲೇವಾರಿ

ಕುಂದಾಪುರ: ಹೋಬಳಿಯ ಯಾವುದೇ ಅರ್ಜಿದಾರರು ಸರಿಯಾದ ಪೂರಕ ದಾಖಲೆ ನೀಡಿದ ಹೊರತಾಗಿಯೂ ಸಕಾಲದಲ್ಲಿ ಕಡತ ವಿಲೇವಾರಿ ಆಗದಿದ್ದರೆ ಇಡೀ ತಾಲೂಕು ಕಚೇರಿ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕರ ಅರ್ಜಿ ಬಾಕಿ ಇರಿಸಿಕೊಳ್ಳದೆ ಅಗತ್ಯ ಇದ್ದಲ್ಲಿ ಮಾತ್ರ ಹಿಂಬರಹ ನೀಡಿ, ಉಳಿದಂತೆ ಕಡತಗಳನ್ನು ಅರ್ಜಿದಾರರಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ವಿಲೇವಾರಿ ಮಾಬೇಕು. ಮುಖ್ಯವಾಗಿ ಆರ್‌ಟಿಸಿ ಸಮಸ್ಯೆಗಳು, ಭೂ ವ್ಯಾಜ್ಯ, ಅಕ್ರಮ ಸಕ್ರಮ, 94ಸಿ, ಆರ್‌ಆರ್‌ಟಿ ಹಾಗೂ 11 ಈ ಕಡತಗಳನ್ನು ಆದ್ಯತೆಯಲ್ಲಿ ವಿಲೇಗೊಳಿಸುವಂತೆ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಸಾರ್ವಜನಿಕರು ತಾಲೂಕು ಕಚೇರಿಗೆ ಸಲ್ಲಿಸಿರುವ ವಿವಿಧ ಅರ್ಜಿಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸಮ್ಮುಖ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರ ಕಚೇರಿಗೆ ಸಮಸ್ಯೆಗಳ ನಿವಾರಣೆ ಬಗ್ಗೆ ಮನವಿ ಮಾಡಿದ ಅರ್ಜಿದಾರರನ್ನು ಅಧಿಕಾರಿಗಳ ಜತೆ ಮುಖಾಮುಖಿ ಮಾಡಿಸಿ, ಸದ್ರಿ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಪಡಿಸಲು ಸೂಚಿಸಿ, ಸಮರ್ಪಕ ದಾಖಲೆ ಇದ್ದರೂ ಕೆಲಸ ಮಾಡಿ ಕೊಡದೇ ಅಥವಾ ಸತಾಯಿಸದೆ ತ್ವರಿತವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

ಜಂಟಿ ಸರ್ವೇ ಚುರುಕುಗೊಳಿಸಿ

ಅಕ್ರಮ ಸಕ್ರಮ ಹಾಗೂ 94ಸಿ ಅರ್ಜಿಗಳ ತ್ವರಿತ ವಿಲೇವಾರಿ ನೆಲೆಯಲ್ಲಿ ನಿರಂತರವಾಗಿ ಜಂಟಿ ಸರ್ವೇ ನಡೆಸಲು ಈಗಾಗಲೇ ಹಲವು ಬಾರಿ ತಿಳಿಸಲಾಗಿದೆ. ಈ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದ್ದರೂ, ಜಂಟಿ ಸರ್ವೇಯನ್ನು ಚುರುಕುಗೊಳಿಸಿ ಅರ್ಹರಿಗೆ ಭೂಮಿ ಹಕ್ಕು ನೀಡಲು ಕ್ರಮ ವಹಿಸಲು ತಹಸೀಲ್ದಾರರಿಗೆ ಸೂಚನೆ ನೀಡಿದರು. ವಂಡ್ಸೆ ಹೋಬಳಿಯ ತಲ್ಲೂರು ಹಾಗೂ ದೇವಲ್ಕುಂದ ಗ್ರಾಮಗಳ 3 ಫಲಾನುಭವಿಗಳಿಗೆ ಶಾಸಕರು 94ಸಿ ಹಕ್ಕುಪತ್ರ ವಿತರಿಸಿದರು.