ಕುಂಟಾರು ಸಾಹಿತ್ಯೋತ್ಸವವನ್ನು ಸಾಹಿತಿ ಡಾ.ವಸಂತಕುಮಾರ ತಾಳ್ತಜೆ ಉದ್ಘಾಟಿಸಿದರು. ಪ್ರಮುಖರಾದ ಎಂ.ನಾ.ಚಂಬಲ್ತಿಮಾರ್, ಎಚ್.ಎಸ್.ವಿಶ್ವನಾಥ್, ಡಾ.ಕೆ.ಕಮಲಾಕ್ಷ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ
ಸಾಹಿತ್ಯವನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ಕುಂಟಾರು ಸಾಹಿತ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ನಾವು ಸಾಹಿತ್ಯ ಮತ್ತು ಬದುಕಿನ ದಿನ ಬಳಕೆಯ ಪದಗಳತ್ತ ಮುಖ ಮಾಡಬೇಕು. ನಮ್ಮ ಓದು ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸಬೇಕು ಮತ್ತು ಅದಕ್ಕೆ ನಾವೇ ಉತ್ತರ ಕಂಡುಕೊಳ್ಳಬೇಕು ಎಂದು ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಅಭಿಪ್ರಾಯಪಟ್ಟರು.
ಕುಂಟಾರು ಎಯುಪಿ ಶಾಲೆ ಮತ್ತು ಕಾಸರಗೋಡು ಕನ್ನಡ ಸಂಶೋಧನಾ ಕೇಂದ್ರದ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಗಡಿನಾಡ ಘಟಕ, ಎಯುಪಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರದೊಂದಿಗೆ ಭಾನುವಾರ ನಡೆದ ಕುಂಟಾರು ಸಾಹಿತ್ಯೋತ್ಸವ- 2026ಉದ್ಘಾಟಿಸಿ ಮಾತನಾಡಿದರು. ಬಳಿಕ ಪುಸ್ತಕ ಬಿಡುಗಡೆ ಮಾಡಿದರು.
ದಿ.ಮಾಟೆಡ್ಕ ಪುರುಷೋತ್ತಮ ರಾವ್ ದ್ವಾರವನ್ನು ಎಂ.ನಾ.ಚಂಬಲ್ತಿಮಾರ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಕಾಸರಗೋಡು ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಕಾರಡ್ಕ ಗ್ರಾಮ ಪಂ. ಅಧ್ಯಕ್ಷೆ ಜನನಿ.ಎಂ ವಸ್ತು ಪ್ರದರ್ಶನ ಉದ್ಘಾಟಿಸಿದರು. ಹಿರಿಯ ವ್ಯಂಗ್ಯಚಿತ್ರಗಾರ ಎಚ್.ಎಸ್.ವಿಶ್ವನಾಥ್ ಬೆಂಗಳೂರು ಚಿತ್ರ ಮತ್ತು ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಿದರು.
ಗ್ರಾಮ ಪಂ. ಸದಸ್ಯೆ ಬೇಬಿ ಕಟ್ಟತ್ತಬಯಲು, ಮುಖ್ಯಶಿಕ್ಷಕಿ ದಾಕ್ಷಾಯಣಿ ಉಪಸ್ಥಿತರಿದ್ದರು. ಸಾಹಿತ್ಯೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಸ್ವಾಗತಿಸಿದರು. ಡಾ.ಮೋಹನ ಕುಂಟಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಜಗದೀಶ ಮಾಸ್ತರ್ ವಂದಿಸಿದರು. ಡಾ.ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.