ಉಡುಪಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಮಾತನಾಡಿದರು. ಜಿಲ್ಲೆಯ ಶಾಸಕರು, ಅಧಿಕಾರಿಗಳು ಇದ್ದರು. 
ಉಡುಪಿ

ಅತಿವೃಷ್ಟಿ ತೊಂದರೆ ಎದುರಿಸಲು ಸಜ್ಜಾಗಿ

* ಜಿಲ್ಲಾಡಳಿತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸೂಚನೆ

* ಜಿಪಂ ಸಭಾಂಗಣದಲ್ಲಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆ

ಉಡುಪಿ: ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಜನ-ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಳೆಯಿಂದ ರಸ್ತೆಗಳು ಹಾಳಾಗಿ ಸುಗಮ ಸಂಚಾರಕ್ಕೆ ವ್ಯತ್ಯಯ ಆಗದಂತೆ ಹಾಗೂ ಕಾಲುಸಂಕಗಳ ಬಳಕೆಯ ಸಂದರ್ಭದಲ್ಲಿ ಜನರು ಜಾರಿಬಿದ್ದು ಅನಾಹುತ ಆಗದಂತೆ ಈಗಲೇ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಅರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಉಡುಪಿ ಜಿಪಂನ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಶನಿವಾರ (ಮೇ 16) ಆಯೋಜಿಸಿದ್ದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪಾಯಕಾರಿ ಮರಗಳ ತೆರವು ಮಾಡಿ
ಅನಗತ್ಯವಾಗಿ ಬೆಳೆದ ಮರದ ಟೊಂಗೆಗಳನ್ನು ಕತ್ತರಿಸಿ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಮಳೆಯಿಂದಾಗಿ ಕಂಬ ಬಿದ್ದಲ್ಲಿ ತ್ವರಿತವಾಗಿ ಕಂಬ ಅಳವಡಿಸಿ ಅಥವಾ ಪೂರಕ ಕ್ರಮದಿಂದ ಮರು ವಿದ್ಯುತ್​ ಸಂಪರ್ಕ ಕಲ್ಪಿಸಬೇಕು. ಅಪಾಯಕಾರಿ ಮರಗಳಿದ್ದಲ್ಲಿ ತೆರವು ಮಾಡಿ ಎಂದು ಸಲಹೆ ನೀಡಿದರು.

ಕಾಮಗಾರಿ ಬೇಗ ಮುಗಿಸಿ

ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ದುರಸ್ತಿ ಕಾರ್ಯ ಕೈಗೊಳ್ಳಲು 430 ಕೋಟಿ ರೂ. ವೆಚ್ಚದಲ್ಲಿ 186 ವಿವಿಧ ರೀತಿಯ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಈವರೆಗೆ 45 ಕಾಮಗಾರಿ ನಡೆದಿದ್ದು ಪೂರ್ಣವಾಗಿಲ್ಲ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಅವುಗಳನ್ನು ಪೂರ್ಣಗೊಳಿಸಬೇಕು. ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಸಕಾಲಕ್ಕೆ ಹಕ್ಕುಪತ್ರ ವಿತರಿಸಿ

ಕಂದಾಯ ಇಲಾಖೆಯಲ್ಲಿ ಜಾಗ ಮಂಜೂರು ಮಾಡಿದರೂ ದಾಖಲಾತಿ ನೀಡಲು ಅನುಕೂಲವಾಗುವಂತೆ 1-5 ಡಾಟಾ ಎಂಟ್ರಿ ಮಾಡಲು 3,652 ಕಡತಗಳು ಬಾಕಿ ಇವೆ. ಅವುಗಳನ್ನು ಆದ್ಯತೆಯ ಮೇಲೆ ಮಾಡಬೇಕು. ಜಾಗ ಕೋರಿ 53-54 ಹಾಗೂ 94ಸಿ ಗಳಲ್ಲಿ ಬಡಜನರು ಅರ್ಜಿ ಸಲ್ಲಿಸಿದ್ದಾರೆ. ಈವರೆಗೂ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ಪ್ರತಿವಾರ ತಹಸೀಲ್ದಾರರ ಸಭೆ ನಡೆಸಿ, ಹಕ್ಕುಪತ್ರ ನೀಡಲು ಮುಂದಾಗಬೇಕು. ಮುಂದಿನ ಬಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಾಗ 500ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಣೆ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​, ವಿಪ ಸದಸ್ಯರಾದ ಎಸ್​.ಎಲ್​. ಭೋಜೇಗೌಡ, ಡಾ.ಮಂಜುನಾಥ್​ ಭಂಡಾರಿ, ಕಿಶೋರಕುಮಾರ್​ ಪುತ್ತೂರು, ಶಾಸಕರಾದ ವಿ.ಸುನೀಲಕುಮಾರ್​, ಯಶ್​ಪಾಲ್​ ಸುವರ್ಣ, ಗುರುರಾಜ್​ ಶೆಟ್ಟಿ ಗಂಟಿಹೊಳೆ, ಎ.ಕಿರಣಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ಡಿಎಫ್​ಒ ರುಥ್ರೇನ್​ ಪಿ., ವೈಲ್ಡ್​ಲ್​ೈ ಡಿಎಫ್​ಒ ಶಿವರಾಂ ಎಂ. ಬಾಬು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆರೋಗ್ಯದ ಅರಿವು ಮೂಡಿಸಿ
ಮಳೆಗಾಲದಲ್ಲಿ ಅನೇಕ ರೋಗ-ರುಜಿನ ಹರಡುವ ಸಾಧ್ಯತೆ ಇರುವುದುರಿಂದ ಜನರಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯಕ್ಕನುಗುಣವಾಗಿ ಔಷಧ ದಾಸ್ತಾನು ಇಟ್ಟುಕೊಳ್ಳಬೇಕು. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ನೇಮಿಸಬೇಕು. ಆಗದಿದ್ದಲ್ಲಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆರೋಗ್ಯ ಸೇವೆ ಒದಗಿಸಬೇಕು. ಸ್ಕ್ಯಾನಿಂಗ್​ ಸೇರಿದಂತೆ ಇನ್ನಿತರ ಔಷಧಗಳಿಗಾಗಿ ಚೀಟಿ ಬರೆದುಕೊಟ್ಟು ಖಾಸಗಿಯಲ್ಲಿ ಪಡೆಯುವಂತೆ ಸೂಚಿಸಲಾಗುತ್ತಿದೆ. ಬಡಜನರಿಗೆ ಹಣದ ಕೊರತೆ ಇರುತ್ತದೆ. ಅವರಿಗೆ ತೊಂದರೆ ಆಗದಂತೆ ಆರೋಗ್ಯ ಸೇವೆ ನೀಡಬೇಕು. ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ನಿಗದಿಯಂತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಸೂಚಿಸಿದರು.

ರೈತರ ಮನೆಬಾಗಿಲಿಗೆ ನೀಡಿ ಸೌಕರ್ಯ

ಮಂಗಾರು ಮಳೆ ಆರಂಭದಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಲಿವೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅವರ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಬೇಕು. ರೈತರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪುಸ್ತಕದಲ್ಲಿ ಅಂಕಿ-ಸಂಖ್ಯೆಯಲ್ಲಿ ತೋರಿಸಬೇಡಿ. ರೈತರ ಮನೆ ಬಾಗಿಲಿಗೆ ಹೋಗಿ ಸೌಕರ್ಯ ನೀಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸೂಚಿಸಿದರು.