ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಘಟಪ್ರಭಾ ಉದ್ಯಮಿ ಎಚ್​.ಜಯಶೀಲ ಎನ್​.ಶೆಟ್ಟಿ ತಮ್ಮ ಸಂಸ್ಥೆ ವತಿಯಿಂದ ಐದು ಶಾಲೆಗಳಿಗೆ ಶಾಲಾ ವಾಹನಗಳನ್ನು ಹಸ್ತಾಂತರಿಸಿದರು. ಪ್ರಮುಖರಾದ ಕಿರಣ್​ ಶೆಟ್ಟಿ, ಬಟ್ನಾಡಿ ಅಣ್ಣಪ್ಪ ಶೆಟ್ಟಿ, ಸುಧಾಕರ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಜಯಶೀಲ ಶೆಟ್ಟಿ, ಡಾ.ಅತುಲ್​ಕುಮಾರ್​ ಶೆಟ್ಟಿ, ಕರುಣಾಕರ ಶೆಟ್ಟಿ ಇದ್ದರು. 
ಉಡುಪಿ

ಉತ್ತಮ ಸೌಲಭ್ಯದಿಂದ ಗುಣಮಟ್ಟದ ಶಿಕ್ಷಣ

Vinod Kumar

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಎಚ್​.ಜಯಶೀಲ ಎನ್​.ಶೆಟ್ಟಿ ಹೇಳಿಕೆ
  • ಶಾಲಾ ವಾಹನ, ಆಂಬುಲೆನ್ಸ್​ ಹಸ್ತಾಂತರ
ವಿಜಯವಾಣಿ ಸುದ್ದಿಜಾಲ ಬೈಂದೂರು
ಗ್ರಾಮೀಣ ಭಾಗದ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಸೌಲಭ್ಯ ಕೊಟ್ಟಾಗ ಅಲ್ಲಿ ಉತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಿಮಾರ್ಣವಾಗುತ್ತದೆ. ಅನುಭವಿ ಶಿಕ್ಷಕರ ತಂಡ, ಆಡಳಿತ ಮಂಡಳಿ ಸಹಕಾರ ಜತೆಗೆ ಸಾಮಾಜಿಕ ಚಿಂತನೆ ಹಾಗೂ ಕಳಕಳಿ ಇದ್ದಾಗ ಹಳ್ಳಿಯ ಮಕ್ಕಳಿಗೆ ಸಾಧನೆ ಮಾಡಲು ಸಾಧ್ಯ ಎಂದು ಘಟಪ್ರಭಾ ಉದ್ಯಮಿ ಎಚ್​.ಜಯಶೀಲ ಎನ್​.ಶೆಟ್ಟಿ ಹೇಳಿದರು.
ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ತಮ್ಮ ಸಂಸ್ಥೆ ವತಿಯಿಂದ ರಾಗಿಹಕ್ಲು, ಯರುಕೋಣೆ, ಆಜ್ರಿಹಾರ, ಹೆಸ್ಕತ್ತೂರು ಹಾಗೂ ಚಪ್ಪರಿಕೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಶಾಲಾ ವಾಹನ ಮತ್ತು ಸಿದ್ದಾಪುರ ಬ್ರಾಹ್ಮೀ ಯುವಕ ಮಂಡಲಕ್ಕೆ ಆಂಬುಲೆನ್ಸ್​ ಹಸ್ತಾಂತರಿಸಿ ಮಾತನಾಡಿದರು.

ಸಮಾಜದ ಋಣ ತೀರಿಸಲು ಪ್ರಯತ್ನ

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಶಾಲೆ ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಪಾಲಕರು ಮತ್ತು ವಿದ್ಯಾರ್ಥಿಗಳ ಅಭಿರುಚಿ ವಿಭಿನ್ನವಾದರೂ ಪ್ರಸ್ತುತ ಪಾಲಕರ ಅಭಿರುಚಿಗಿಂತ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು. ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯದ ಕೊರತೆಯಿದ್ದರೂ ಪ್ರತಿಭೆಗಳಿಗೆ ಕೊರತೆಯಿಲ್ಲ. ಈ ನಿಟ್ಟಿನಲ್ಲಿ ಗಳಿಕೆಯ ಒಂದಂಶವನ್ನು ಶಾಲೆಗಳ ಅಭಿವೃದ್ಧಿಗೆ ನೀಡುವ ಮೂಲಕ ಸಮಾಜದ ಋಣ ತೀರಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.

ದಾನಿಗಳಿಗೆ ಕೃತಜ್ಞತೆ

ಐದೂ ಶಾಲೆಗಳ ಪರವಾಗಿ ಶಿಕ್ಷಕ ನಾರಾಯಣ ದೇವಾಡಿಗ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಗುಡೇ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘ ಉಪಾಧ್ಯಕ್ಷ ಕಿರಣ್​ ಶೆಟ್ಟಿ, ನಿರ್ದೇಶಕರಾದ ಬಟ್ನಾಡಿ ಅಣ್ಣಪ್ಪ ಶೆಟ್ಟಿ, ಸುಧಾಕರ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಶೀಲ ಶೆಟ್ಟಿ, ಡಾ.ಅತುಲ್​ಕುಮಾರ್​ ಶೆಟ್ಟಿ, ಕರುಣಾಕರ ಶೆಟ್ಟಿ ಇದ್ದರು. ಶಿಕ್ಷಕ ಜಯಪ್ರಕಾಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಹುಟ್ಟೂರಿನಲ್ಲಿ ಶಾಶ್ವತ ಕೊಡುಗೆ ನೀಡಬೇಕೆನ್ನುವ ಉದ್ದೇಶದಿಂದ ಹಾಗೂ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದೆಂಬ ನೆಲೆಯಲ್ಲಿ ಅತ್ಯಂತ ಗ್ರಾಮೀಣ ಭಾಗದ ಹಲವಾರು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ವಾಹನ ನೀಡಿದ್ದೇನೆ. ಇದು ಪ್ರಚಾರಕ್ಕಾಗಿ, ಸನ್ಮಾನಕ್ಕಾಗಿ ಅಥವಾ ಲಾಭಕ್ಕಾಗಿ ಮಾಡಿದ ಕಾರ್ಯವಲ್ಲ. ಈ ಸತ್ಕಾರ್ಯದಿಂದ ಹೃದಯ ತುಂಬಿದೆ.

| ಎಚ್​.ಜಯಶೀಲ ಎನ್​.ಶೆಟ್ಟಿ, ಘಟಪ್ರಭಾ ಉದ್ಯಮಿ