ನೀಟ್ ಟಾಪರ್ ಮೌರ್ಯ ಅವರನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಸ್ಮರಣಿಕೆ ನೀಡಿ ಗೌರವಿಸಿದರು. ಮೌರ್ಯ ವೈ.ಡಿ. ಅವರ ತಂದೆ ದರ್ಶನ್ ವೈ.ಎಂ. ಉಪಸ್ಥಿತರಿದ್ದರು.  
ಉಡುಪಿ

ಎಕ್ಸೆಲ್ ವಿದ್ಯಾಸಂಸ್ಥೆಯಿಂದ ಗುಣಮಟ್ಟದ ಶಿಕ್ಷಣ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಷ್ಟ್ರಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-2026, ರಾಜ್ಯಮಟ್ಟದ ಕೆ-ಸಿಇಟಿ ಹಾಗೂ ಜೆಇಇ ಮೇನ್ಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪ್ರತಿಮ ಸಾಧನೆಗೈದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಂಸ್ಥೆಗೆ ಕೀರ್ತಿ ತಂದಿರುವ ಹೆಮ್ಮೆಯ ವಿದ್ಯಾರ್ಥಿ ಮೌರ್ಯ ವೈ.ಡಿ. ಅವರನ್ನು ಎಕ್ಸೆಲ್ ಪಪೂ ಕಾಲೇಜು ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಎಕ್ಸೆಲ್ ಕಾಲೇಜಿನ 470ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು ಅವಕಾಶ ಗಳಿಸಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಸಂದ ಜಯ. ಪ್ರತಿ ವರ್ಷದಂತೆ ಈ ಬಾರಿಯೂ ಸಂಸ್ಥೆ ಗುಣಮಟ್ಟದ ಶಿಕ್ಷಣದಿಂದ ರಾಷ್ಟ್ರಮಟ್ಟದ ತರಬೇತಿಯಲ್ಲಿ ಕರ್ನಾಟಕದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪಾಲಕರ ನಂಬಿಕೆ ಹಾಗೂ ಶಿಕ್ಷಕರ ಸಮರ್ಪಣಾ ಭಾವಕ್ಕೆ ಐತಿಹಾಸಿಕ ಫಲಿತಾಂಶವೇ ಸಾಕ್ಷಿ ಎಂದು ಪ್ರಶಂಸಿಸಿದರು.
ವಿವಿಧ ವಿಭಾಗಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಿಂಚಿದ ಎಕ್ಸೆಲ್ ಸಾಧಕರನ್ನು ಗೌರವಿಸಲಾಯಿತು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ.ಪ್ರಜ್ವಲ್, ನೀಟ್ ಸಂಯೋಜಕ ಶ್ರೀನಿಧಿ ರಾಜ್ ಶೆಟ್ಟಿ, ನಿಲಯ ಪಾಲಕ ಅಭಿಜಿತ್, ಆಡಳಿತ ಮಂಡಳಿ ಪದಾಧಿಕಾರಿಗಳು, ಮೌರ್ಯ ವೈ.ಡಿ. ಅವರ ತಂದೆ ದರ್ಶನ್ ವೈ.ಎಂ., ತಾಯಿ ಎ.ಜೆ.ಸುವರ್ಣ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಪಾಲಕರು ಉಪಸ್ಥಿತರಿದ್ದರು.

ತ್ರಿವಳಿ ಪರೀಕ್ಷೆಗಳಲ್ಲಿ ಸಾಧನೆ

ಎಕ್ಸೆಲ್‌ನ ಅಗ್ರಗಣ್ಯ ಸಾಧಕ ಮೌರ್ಯ ವೈ.ಡಿ. ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 673 ಅಂಕ ಗಳಿಸಿ, 99.6691 ಪರ್ಸಂಟೇಲ್‌ನೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 271ನೇ ರ‌್ಯಾಂಕ್, ರಾಜ್ಯಮಟ್ಟದ ಕೆ-ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ 75ನೇ ರ‌್ಯಾಂಕ್ ಮುಡಿಗೇರಿಸಿಕೊಂಡಿದ್ದಾರೆ. ಜೆಇಇ ಮೇನ್ಸ್ ಪ್ರವೇಶ ಪರೀಕ್ಷೆಯಲ್ಲೂ 99.6691ಪರ್ಸಂಟೇಲ್ ಗಳಿಸಿ ಜಿಲ್ಲಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಎಕ್ಸೆಲ್ ಸಂಸ್ಥೆ ಕಟ್ಟುನಿಟ್ಟಾದ ಶಿಸ್ತುಬದ್ಧ ವಾತಾವರಣ, ಪರಿಣಿತ ಉಪನ್ಯಾಸಕರು ತಡರಾತ್ರಿಯವರೆಗೂ ಲಭ್ಯವಿದ್ದು, ನಮ್ಮ ಕಲಿಕೆಯ ಸಂಶಯ ಪರಿಹರಿಸುತ್ತಿದ್ದ ಪ್ರವೃತ್ತಿ ಮತ್ತು ನಿರಂತರ ಮಾದರಿ ಪರೀಕ್ಷೆಗಳೆ ಬಹುಮುಖ ಯಶಸ್ಸಿಗೆ ಭದ್ರ ಬುನಾದಿಯಾಗಿದೆ. ಎಕ್ಸೆಲ್ ಸಂಸ್ಥೆ ಅಧ್ಯಕ್ಷರಿಗೆ, ಪ್ರಾಂಶುಪಾಲರು, ಪ್ರಾಧ್ಯಾಪಕರು, ನಿಲಯ ಪಾಲಕರಿಗೆ ಚಿರಋಣಿ.

— ಮೌರ್ಯ ವೈ.ಡಿ.,