ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಡಾ.ಕರ್ಜಗಿ ಅವರಿಗೆ ಶ್ರೀಕೃಷ್ಣಗಿತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.  
ಉಡುಪಿ

ಗೀತೆ ಮನುಷ್ಯ ಬದುಕುವ ಬಗೆ ತಿಳಿಸುವ ಗ್ರಂಥ: ಡಾ. ಕರ್ಜಗಿ

ಉಡುಪಿ: ಭಗವದ್ಗೀತೆ ಪ್ರತಿಯೊಂದು ಅಕ್ಷರವೂ ಅಜ್ಞಾನ ಕಳೆಯುತ್ತದೆ. ಭಗವದ್ಗೀತೆ ಕೇವಲ ಹಿಂದೂ ಧರ್ಮದ ಗ್ರಂಥವಲ್ಲ. ಮನುಷ್ಯ ಹಾಗೂ ಸಮಾಜ ಬದುಕುವ ಬಗೆಯನ್ನು ಕಲಿಸುವ ಗ್ರಂಥ. ಪ್ರಪಂಚದ ಯಾವುದೇ ಧರ್ಮದ ಗ್ರಂಥಗಳಲ್ಲಿ ಕೃಷ್ಣನಂಥ ಪಾತ್ರ ಇಲ್ಲ ಎಂದು ಶಿಕ್ಷಣ ತಜ್ಞ, ಡಾ.ಗುರುರಾಜ ಕರ್ಜಗಿ ಹೇಳಿದರು.

ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಬುಧವಾರ ಗೀತಾ ಮಂದಿರದ ಶ್ರೀ ನೃಸಿಂಹ ಸಭಾಂಗಣದಲ್ಲಿ ನಡೆದ ಜ್ಞಾನಸಂದೇಶ ಕಾರ್ಯಕ್ರಮದಲ್ಲಿ 'ಭಗವದ್ಗೀತೆ ಮತ್ತು ಶಿಕ್ಷಣ' ವಿಷಯದಲ್ಲಿ ಉಪನ್ಯಾಸ ನೀಡಿದರು.

ಆಧುನಿಕ ಶಿಕ್ಷಣದಲ್ಲಿರುವ ಮನೋವಿಜ್ಞಾನ, ಜೀವನಾದರ್ಶ ಶಿಕ್ಷಣ ಎಲ್ಲವೂ ಗೀತೆಯಲ್ಲಿ ಉಲ್ಲೇಖವಾಗಿದೆ. ಇಂದಿನ ಶಿಕ್ಷಣದಲ್ಲಿ ಅಜ್ಞಾನದ ಕೊರತೆಗಿಂತ ವಿವೇಕದ ಕೊರತೆ ಹೆಚ್ಚಾಗಿದೆ. ವಿವೇಕ ಇಲ್ಲದ ಪದವಿ ವ್ಯರ್ಥ. ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ನೀಡಬೇಕು. ತಮಗೋಸ್ಕರ ಬದುಕುವವರನ್ನು ಸಮಾಜ ಮರೆಯುತ್ತದೆ. ಉಪಕಾರಿಗಳನ್ನು ಸ್ಮರಿಸುತ್ತದೆ ಎಂದರು.

ಒತ್ತಡ ಸಲ್ಲದು
ಒತ್ತಡ ಇಲ್ಲದಿರುವುದೇ ಸಾಧನೆಗೆ ಮೂಲ. ಒತ್ತಡ ಇದ್ದಾಗ ಕೆಲಸ ಕಡಿಮೆಯಾಗುತ್ತದೆ. ವಿದ್ಯಾರ್ಥಿ ಭಾವೋದ್ವೇಗಕ್ಕೆ ಒಳಗಾಗದೇ ಸ್ಥಿತಪ್ರಜ್ಞನಾಗಿರಬೇಕು. ಮಕ್ಕಳಿಗೆ ಮನಸ್ಸಿನ ಬಗ್ಗೆ ತಿಳಿಸಬೇಕು. ಅವರಿಗೆ ತೀಮಾರ್ನ ಕೈಗೊಳ್ಳುವ ಸ್ವಾತಂತ್ರ್ಯವನ್ನು ಶಿಕ್ಷಣದಲ್ಲಿ ನೀಡಬೇಕು ಎಂದರು.

ಶಿಕ್ಷಕ ಮಾರ್ಗದರ್ಶಕನೇ ಹೊರತು ಭಾಷಣಕಾರನಲ್ಲ. ಗುರುವಿನ ಬಗ್ಗೆ ಶ್ರದ್ಧೆ ಇಲ್ಲದಿದ್ದಲ್ಲಿ ಜ್ಞಾನ ಲಭಿಸದು. ಗೂಗಲ್​ನಿಂದಾಗಿ ಈಚಿನ ದಿನಗಳಲ್ಲಿ ಗುರುವಿನ ಪಾತ್ರ ಕಡಿಮೆಯಾಗಿದೆ. ಜೊತೆಗೆ ಗುರುಗಳು ಹೆಚ್ಚಿನ ಜ್ಞಾನ ಸಂಪಾದಿಸಬೇಕಾದ ಅನಿವಾರ್ಯತೆ ನಿಮಾರ್ಣವಾಗಿದೆ ಎಂದರು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ, ಸ್ವಪ್ರಯತ್ನದಿಂದ ಸಾಧನೆ ಸಾಧ್ಯ. ನಮ್ಮ ಶಕ್ತಿ, ಸಾಮರ್ಥ್ಯ ಅರಿಯಬೇಕು ಎಂದು ಪುತ್ತಿಗೆ ಶ್ರೀಗಳು ಹೇಳಿದರು. ಕಿರಿಯ ಶ್ರೀ ಸುಶ್ರೀಂದ್ರತಿರ್ಥ ಶ್ರೀಪಾದರು ಉಪಸ್ಥಿತರಿದ್ದರು. ನವದೆಹಲಿ ಇಸ್ರೋ ಮಾಜಿ ಉಪ ನಿರ್ದೇಶಕ ಎಸ್​.ವಿ. ಶರ್ಮ, ವೀಣಾ ವಾದಕಿ ರೇವತಿ ಕಾಮತ್​, ರಘುನಾಥ ಆಸ್ಟಿನ್​ ಅಭ್ಯಾಗತರಾಗಿದ್ದರು. ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ಶ್ರೀಮಠದ ಕೆ.ವಿ.ರಮಣ್​ ಸ್ವಾಗತಿಸಿದರು. ಸುಗುಣಮಾಲಾ ಸಂಪಾದಕ ಮಹಿತೋಷ್​ ಆಚಾರ್ಯ ನಿರೂಪಿಸಿದರು.